ಕೊಯನಾಡು ಗ್ರಾಮದಲ್ಲಿ ಜೇನು ಪೆಟ್ಟಿಗೆ ಹಾಗೂ ಹೊಲಿಗೆ ಯಂತ್ರ ಸೇರಿದಂತೆ ವಿವಿಧ ಸೌಲಭ್ಯ ವಿತರಿಸಿದ ಎ.ಎಸ್.ಪೊನ್ನಣ್ಣ

Share this post :

ತಾಲ್ಲೂಕಿನ ಕೊಯನಾಡು ವಲಯ ಅರಣ್ಯ ಕಚೇರಿ ಬಳಿ ನೂತನವಾಗಿ ನಿರ್ಮಿಸಿರುವ ಅಧಿಕಾರಿಗಳ ವಸತಿ ಗೃಹವನ್ನು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸೋಮವಾರ ಉದ್ಘಾಟಿಸಿದರು. ಕೊಯನಾಡು ಬಳಿಯ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಸತಿ ಗೃಹ ಉದ್ಘಾಟಿಸಿ ಶಾಸಕರು ಮಾತನಾಡಿದರು.

30 ಜನ ಕೃಷಿಕರಿಗೆ ತಲಾ 2 ಜೇನು ಪೆಟ್ಟಿಗೆ, ಹಾಗೂ 6 ಜನ ಮಹಿಳೆಯರಿಗೆ ಹೊಲಿಗೆಯಂತ್ರ ಹಸ್ತಾಂತರಿಸಿದರು. ಜೊತೆಗೆ ಊರುಬೈಲು ಮತ್ತು ಕೂಡಡ್ಕ ಸರ್ಕಾರಿ ಶಾಲೆಗೆ ಡಿಜಿಟಲ್ ಸಾಕ್ಷರತೆ ಉದ್ದೇಶದಿಂದ ಲ್ಯಾಪ್‍ಟಾಪ್ ಮತ್ತು ಪ್ರಾಜೆಕ್ಟರ್‍ನ್ನು ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸ್ವಂತ ಶಕ್ತಿಯಿಂದ ಜೀವನ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಜೇನು ಸಾಕಾಣಿಕೆಯ ಪೆಟ್ಟಿಗೆಯನ್ನು 30 ಜನರಿಗೆ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಡಿಜಿಟಲ್ ಸಾಕ್ಷರತೆ ಸಂಬಂಧ ಲ್ಯಾಪ್‍ಟಾಪ್ ಮತ್ತು ಪ್ರಾಜೆಕ್ಟರ್ ವಿತರಿಸಲಾಗಿದೆ. ಹಾಗೆಯೇ ಮಹಿಳೆಯರ ಸ್ವ ಉದ್ಯೋಗಕ್ಕಾಗಿ 6 ಜನ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ ಎಂದರು.

ಕೊಡಗು ಮಾನವ ವನ್ಯಜೀವಿ ಸಂಘರ್ಷ ಉಪಶಮನ ಪ್ರತಿಷ್ಠಾನ ನಿಧಿ ವತಿಯಿಂದ ಸುಸ್ಥಿರ ಅಭಿವೃದ್ಧಿ ಚಟುವಟಿಕೆ ಅಂಗವಾಗಿ ಕಾಡಂಚಿನ ಗ್ರಾಮಸ್ಥರಿಗೆ ಸ್ವ ಉದ್ಯೋಗ ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು. ಗ್ರಾಮೀಣ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸ್ವ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗುವತ್ತ ಗಮನಹರಿಸಬೇಕು ಎಂದು ಸಲಹೆ ಮಾಡಿದರು.
ಸ್ವ ಉದ್ಯೋಗ ಕೈಗೊಳ್ಳುವುದರಿಂದ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೆಚ್ಚಾಗಲಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವ ಉದ್ಯೋಗ ಕೈಗೊಂಡು ಪ್ರಗತಿ ಸಾಧಿಸುವತ್ತ ಗಮನಹರಿಸಬೇಕು ಎಂದರು.
ಸ್ಥಳೀಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಅನ್ಯೋನ್ಯತೆಯಿಂದ ಇರಬೇಕು. ಕಾಡನ್ನು ಉಳಿಸಬೇಕು. ನಾಡಿನ ಜನರು ಸಹ ಅಭಿವೃದ್ಧಿಯತ್ತ ಸಾಗಬೇಕು. ಒಟ್ಟಾರೆ ಸಮತೋಲನದಿಂದ ಎಲ್ಲರೂ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಅಭಿಪ್ರಾಯಪಟ್ಟರು.

ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ಅವರು ಮಾತನಾಡಿ ಅರಣ್ಯ ಇಲಾಖೆಯಿಂದ ಕಾಡಂಚಿನ ಜನರಿಗೆ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತದೆ. ಇದನ್ನು ಬಳಸಿಕೊಂಡು ಅರಣ್ಯ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂದಿಲ್ ಕುಮಾರ್, ವಲಯ ಅರಣ್ಯಾಧಿಕಾರಿ ದೇಚಮ್ಮ, ಸ್ಥಳೀಯರಾದ ಪಿ.ಎಲ್.ಸುರೇಶ್, ಕಾಡುಮನೆ ಪುರುಷೋತ್ತಮ, ಕುಸುಮಾಕರ, ಹರೀಶ್ ನಿರಂಜನ, ಆಶಾ, ಇತರರು ಇದ್ದರು.

ಬಳಿಕ ಕೊಯನಾಡು ಬಳಿ ನೂತನವಾಗಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಾಗವನ್ನು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ವೀಕ್ಷಿಸಿದರು.
ನಂತರ ಮಾತನಾಡಿದ ಶಾಸಕರು ಕಳೆದ ಎರಡು ವರ್ಷದ ಹಿಂದೆ ಮಳೆಗಾಲದ ಅವಧಿಯಲ್ಲಿ ಸುರಿದ ಹೆಚ್ಚಿನ ಮಳೆಗೆ ಕೊಯನಾಡು ಶಾಲೆ ಹಿಂಬದಿ ಬರೆಕುಸಿದು ಅಪಾಯಕಾರಿ ವಾತಾವರಣ ನಿರ್ಮಾಣವಾಗಿತ್ತು. ಹಾಗಾಗಿ ಮಳೆಗಾಲ ಸಂದರ್ಭದಲ್ಲಿ ಸಂಪಾಜೆಯ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿಕೊಡಲಾಗುತ್ತಿತ್ತು. ವಿದ್ಯಾರ್ಥಿಗಳು ಸಂಪಾಜೆ ಶಾಲೆಗೆ ಹೋಗಿ ಪಾಠ ಪ್ರವಚನ ಕೇಳುತ್ತಿದ್ದರು. ಸದ್ಯ ಈಗ ಶಾಲಾ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ಸೂಕ್ತವಾಗಿದ್ದಲ್ಲಿ ಕಟ್ಟಡ ನಿರ್ಮಾಣ ಮಾಡಲು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ವಿವರಿಸಿದರು.

ಈಗಾಗಲೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 40 ಲಕ್ಷ ರೂ. ಬಿಡುಗಡೆಯಾಗಿದ್ದು, ಉಳಿದ ಹಣವನ್ನು ಬಿಡುಗಡೆ ಮಾಡಿಸಲಾಗುವುದು. ಸದ್ಯ ಶಾಲಾ ಕಟ್ಟಡ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಅವರು ಚರ್ಚಿಸಿ ಅಂತಿಮಗೊಳಿಸಬೇಕಿದೆ. ಜೊತೆಗೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಯು ಶಾಲಾ ಶಿಕ್ಷಣ ಇಲಾಖೆ ಹೆಸರಿಗೆ ಆಗಬೇಕಿದೆ ಎಂದರು.

ಕೊಯನಾಡು ಭಾಗದಲ್ಲಿ ಹಲವು ಕುಟುಂಬಗಳಿದ್ದು, ಇಲ್ಲಿನ ಮಕ್ಕಳು ಬೇರೆಡೆಗೆ ತೆರಳಿ ವಿದ್ಯಾಭ್ಯಾಸ ಮಾಡಬೇಕಿರುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಸ್ಥಳೀಯರ ಒತ್ತಾಯದಂತೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಾಗಿದೆ. ಆದಷ್ಟು ಶೀಘ್ರ ಈ ಕಾರ್ಯ ಆಗಲಿದೆ ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು.
ಈ ಹಿಂದೆ ಜಾಗವನ್ನು ಗುರುತಿಸಲಾಗಿದ್ದು, ಸಮನ್ವಯತೆ ಕೊರತೆಯಿಂದ ಭೂಮಿ ಹಸ್ತಾಂತರವಾಗಿರಲಿಲ್ಲ. ಆದ್ದರಿಂದ ಈ ಜಾಗ ಗುರುತಿಸಲಾಗಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಕೊಡಗು ಜಿಲ್ಲೆಯಲ್ಲಿ ಜಮ್ಮಾಬಾಣೆ ಭೂಮಿಗೆ ಸಂಬಂಧಿಸಿದಂತೆ ತಿದ್ದುಪಡಿ ವಿದೇಯಕಕ್ಕೆ ಅಂಗೀಕಾರ ದೊರೆತಿದ್ದು, ಜಮ್ಮಾ ಹಿಡುವಳಿದಾರರು ಎದುರಿಸುತ್ತಿದ್ದ ಬಹುವರ್ಷಗಳ ಸಮಸ್ಯೆಗೆ ಪರಿಹಾರ ದೊರಕಿದೆ ಎಂದು ಹೇಳಿದರು.

ಪರಿಶಿಷ್ಟರಲ್ಲಿ ಒಳ ಮೀಸಲಾತಿ, ಹಾಗೆಯೇ ದ್ವೇಷ ಭಾಷಣ ನಿಷೇಧ ಸಂಬಂಧ ಕಾಯ್ದೆ ಜಾರಿ, ಹೀಗೆ ಹಲವು ವಿಧೇಯಕ ಮಂಡಿಸಿ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷರಾದ ರಮಾದೇವಿ ಬಾಲಚಂದ್ರ ಕಳಗಿ ಅವರು ಶಾಲಾ ಕಟ್ಟಡ ಇಲ್ಲದೆ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದು, ಸದ್ಯ ಶಾಲಾ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆತಿರುವುದು ಸಂತಸ ತಂದಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪ್ರಮುಖರಾದ ಸೂರಜ್ ಹೊಸೂರು ಇತರರು ಇದ್ದರು.

coorg buzz
coorg buzz