ಮಡಿಕೇರಿ : ಕೊಯಮತ್ತೂರಿನ ಈಶ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿರುವ ಆದಿಯೋಗಿ ಶಿವಾಂಗ ರಥಯಾತ್ರೆ ಡಿಸೆಂಬರ್ 22ರಂದು ಮಡಕೇರಿ ಪ್ರವೇಶಿಸಲಾಗಿದೆ.
ಉಡುಪಿಯಿಂದ ಆರಂಭವಾಗಿರುವ ರಥಯಾತ್ರೆ ಡಿ.21ರಂದು ಸಂಪಾಜೆ ಮೂಲಕ ಕೊಡಗು ಪ್ರವೇಶಿಸಲಿದ್ದು, ಅಂದು ಮದೆನಾಡಿನಲ್ಲಿ ತಂಗಲಿದೆ. ಮಾರನೇ ದಿನ ಅಲ್ಲಿಂದ ಹೊರಟು ಸಂಜೆ ವೇಳೆಗೆ ಮಡಿಕೇರಿ ನಗರಕ್ಕೆ ಬರಲಿದೆ.
ವಿಶೇಷ ವಿನ್ಯಾಸದ ಈ ರಥವನ್ನು ಭಕ್ತರು ನೆರವಿನಿಂದ ಎಳೆಯುತ್ತಾ ಸಾಗುವುದು ವಿಶೇಷ. ಮಡಿಕೇರಿಗೆ ಬರುವ ರಥ ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಹಳೆ ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ಗಣಪತಿ ಬೀದಿ ಮೂಲಕ ಸಾಗಿ ಕಾಶಿ ಮಠದಲ್ಲಿ ರಾತ್ರಿ ತಂಗಲಿದೆ. ನಗರದಲ್ಲಿ ರಥ ಸಾಗುವ ಸಂದರ್ಭ ಭಜನೆ ತಂಡಗಳು, ಶಿವ ಭಕ್ತರು ಜೊತೆಯಾಗಿ ಹೆಜ್ಜೆ ಹಾಕಲಿದ್ದಾರೆ.
ಮಾರನೇ ದಿನ ಬೆಳಗ್ಗೆ ಕುಶಾಲನಗರದತ್ತ ಸಾಗಲಿದೆ. ಒಟ್ಟು 70 ದಿನ ಸಾಗುವ ಈ ರಥಯಾತ್ರೆ 1000ಕ್ಕೂ ಅಧಿಕ ಕಿಲೋ ಮೀಟರ್, ನೂರಕ್ಕೂ ಅಧಿಕ ಗ್ರಾಮ ಮತ್ತು ಪಟ್ಟಣದ ಮೂಲಕ ತೆರಳಲಿದೆ.
ಮಹಾಶಿವರಾತ್ರಿ ಶಿವಾಂಗ ಸಾಧನೆಯ ಭಾಗವಾಗಿ ಶಿವ ರಥವನ್ನು ಎಳೆಯಲಾಗುತ್ತಿದೆ. ಫೆಬ್ರವರಿ 14ಕ್ಕೆ ಕೊಯಮತ್ತೂರು ತಲುಪಿ ಸಂಪನ್ನಗೊಳ್ಳಲಿದೆ. 70 ಮಂದಿ ಆದಿಯೋಗಿ ಸ್ವಯಂಸೇವಕರು ರಥದ ಜೊತೆಗೆ ತೆರಳುತ್ತಿದ್ದು, ಜೊತೆಗೆ ರಥ ಸಾಗುವ ಭಾಗದ ಭಕ್ತರಿಗೂ ರಥ ಎಳೆಯಲು ಅವಕಾಶ ಮಾಡಿಕೊಡಲಾಗಿದೆ.
ಭಕ್ತರು ಪಾಲ್ಗೊಳ್ಳಲು ಮನವಿ : ಸಂಪಾಜೆಯಿಂದ ಮಡಿಕೇರಿವರೆಗೆ ಗುಡ್ಡಗಾಡು ಪ್ರದೇಶ ಹಾಗೂ ಸಾಗುವ ಹಾದಿ ಕಠಿಣವಿರುವ ಕಾರಣ ಈ ಸಂದರ್ಭ ಜಿಲ್ಲೆಯ ಭಕ್ತರು ರಥ ಎಳೆಯಲು ಕೈಜೋಡಿಸುವಂತೆ ಪ್ರಮುಖರು ಮನವಿ ಮಾಡಿದ್ದಾರೆ. ಯಾರು ಬೇಕಾದರೂ ಪಾಲ್ಗೊಳ್ಳಬಹುದಾಗಿದೆ.




