ಬೇಟಿ ಬಚಾವೋ ಬೇಟಿ ಪಡಾವೋ: ಬಾಲ್ಯ ವಿವಾಹ ನಿಷೇಧದ ಕುರಿತು ಮಾಹಿತಿ ಕಾರ್ಯಗಾರ

workshop

Share this post :

ಮಡಿಕೇರಿ:- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಹಯೋಗದೊಂದಿಗೆ 2025-26 ನೇ ಸಾಲಿನ ಬೇಟಿ ಬಚಾವೋ ಬೇಟಿ ಪಡಾವೋ ಕಾಯಕ್ರಮದಡಿಯಲ್ಲಿ ಬಾಲ್ಯ ವಿವಾಹ ನಿಷೇಧದ ಕುರಿತು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಶಾಲಾ ಮಕ್ಕಳಿಗೆ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲೀಸ್ಟ್ ಕೇಶಿನಿ ಅವರು ಉದ್ಘಾಟಿಸಿ ಮಾತನಾಡಿ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಹೆಣ್ಣು ಮಕ್ಕಳ ಉಳಿವು ಮತ್ತು ಅವರ ರಕ್ಷಣೆಯನ್ನು ಖಾತ್ರಿಗೊಳಿಸುವುದು, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಖಾತ್ರಿಗೊಳಿಸುವುದು, ಲಿಂಗ ಪಕ್ಷಪಾತ ಮತ್ತು ಲಿಂಗ ಆಯ್ಕೆ ಮಾಡುವುದನ್ನು ತಡೆಗಟ್ಟುವುದು, ಹೆಣ್ಣು ಮತ್ತು ಗಂಡು ಮಕ್ಕಳ ನಡುವಿನ ಸಮಾನತೆಯನ್ನು ಪ್ರೊತ್ಸಾಹ, ಹೆಣ್ಣು ಮಗು ಶಾಲೆಗೆ ಹೋಗುವುದನ್ನು ಕಾಪಾಡುವುದು, ಲಿಂಗ ಪತ್ತೆ ಪರೀಕ್ಷೆ ಕಂಡುಬಂದಲ್ಲಿ ಕೂಡಲೇ ಸಂಬಂದಪಟ್ಟ ಇಲಾಖೆಗಳಿಗೆ ವರದಿ ಮಾಡಬಹುದಾಗಿದೆ ಎಂದು ತಿಳಿಸಿದರು.

ನಂತರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮಕ್ಕಳ ವಿಶೇಷ ಪೆÇಲೀಸ್ ಘಟಕದ ಸುಮತಿ ಅವರು ಮಾತನಾಡಿ, ಶಾಲಾ ಮಕ್ಕಳು ಮುಖ್ಯವಾಗಿ ಬಾಲ್ಯವಿವಾಹ ನಿಷೇಧದ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿದ್ದು, ಪ್ರಸ್ತುತ ಹುಡುಗನಿಗೆ 21 ವರ್ಷ, ಹುಡುಗಿಗೆ 18 ವರ್ಷಕ್ಕಿಂತ ಮುಂಚೆ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಮಕ್ಕಳನ್ನು ಮದುವೆಯಾಗುವ ವಯಸ್ಕರು, ಬಾಲ್ಯವಿವಾಹ ನಡೆಸುವವರು, ನಿರ್ದೇಶಿಸುವವರು, ಪ್ರೇರೆಪಿಸುವವರು ಬಾಲ್ಯವಿವಾಹದಲ್ಲಿ ಹಾಜರಿದ್ದವರು ಇವರೆಲ್ಲರೂ ತಪ್ಪಿತಸ್ಥರಾಗುತ್ತಾರೆ. ಮಾನ್ಯ ಸರ್ವೋಚ್ಚ ನ್ಯಾಯಾಲಯದ 2017ರ ಆದೇಶದ ಪ್ರಕಾರ 18 ವರ್ಷದೊಳಗಿನ ಪತ್ನಿಯ ಜೊತೆಗಿನ ಲೈಂಗಿಕ ಸಂಪರ್ಕವೂ ಕೂಡ ಅತ್ಯಾಚಾರವಾಗುತ್ತದೆ. ಇದಕ್ಕಾಗಿ ಪತಿಗೆ ಜೈಲು ಮತ್ತು ದಂಡದ ಶಿಕ್ಷೆಯಾಗುತ್ತದೆ. ಮಕ್ಕಳು ಸಣ್ಣ ವಯಸ್ಸಿನಲ್ಲಿ ಬಾಲ್ಯವಿವಾಹವಾದರೆ ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಡರಾಗಿರುವುದಿಲ್ಲ, ಮಕ್ಕಳು ಇಂತಹ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗಬೇಕಾಗುತ್ತದೆ. ಮಕ್ಕಳಿಗೆ ಅಶ್ಲೀಲ ವಿಡಿಯೋ, ಸ್ಪರ್ಶ, ಮಾತು ಇಂತಹ ಸಂದರ್ಭಗಳು ಎದುರಾದರೆ 1098 ಕ್ಕೆ ಕರೆ ಮಾಡಿ ಮಾಹಿತಿ ನೀಡುವುದು. ಇಲ್ಲವಾದಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿಸುವುದು. ಈ ಎಲ್ಲಾ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಮುಖ್ಯ ಶಿಕ್ಷಕರು ನೆರವೇರಿಸಿದರು, ವಿದ್ಯಾರ್ಥಿಗಳು, ಶಾಲಾ ಮೇಲ್ವಿಚಾರಕರಾದ ಸಚಿನ್ ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕದ ಸತ್ಯ ಹಾಗು ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.

 

coorg buzz
coorg buzz