ಪೊನ್ನಂಪೇಟೆ: ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ವಾಲಿಬಾಲ್ ಕ್ರೀಡಾಪಟುಗಳಿದ್ದಾರೆ. ವಾಲಿಬಾಲ್ ಕ್ರೀಡೆಗೆ ಜಿಲ್ಲೆಯ ಕ್ರೀಡಾಪಟುಗಳ ಕೊಡುಗೆ ಅಪಾರವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ವಾಲಿಬಾಲ್ ಕ್ರೀಡೆಯನ್ನು ಮತ್ತಷ್ಟು ಉತ್ತೇಜಿಸಲು ಸೂಕ್ತವಾದ ಕಾರ್ಯ ಯೋಜನೆಗಳನ್ನು ರೂಪಿಸುವಂತೆ ವಿರಾಜಪೇಟೆ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಸಲಹೆ ನೀಡಿದ್ದಾರೆ.
ಕೊಡಗು ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ವಿರಾಜಪೇಟೆಯ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಮಂಗಳವಾರದಂದು ನಡೆದ ವಿಶೇಷ ಸಭೆಯಲ್ಲಿ ಪಾಲ್ಗೊಂಡು ವಿವಿಧ ಬೇಡಿಕೆಗಳನ್ನುೊಳಗೊಂಡ ಸಂಸ್ಥೆಯ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಹಿಂದಿನಿಂದಲೂ ವಾಲಿಬಾಲ್ ಕ್ರೀಡೆ ಹೆಚ್ಚು ಜನಪ್ರಿಯಗೊಂಡಿದೆ. ಕುಗ್ರಾಮಗಳಲ್ಲೂ ಸೇರಿದಂತೆ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ನಿರಂತರವಾಗಿ ವಾಲಿಬಾಲ್ ಪಂದ್ಯಾವಳಿ ಆಯೋಜನೆಗೊಳ್ಳುತ್ತಿದ್ದು, ಈ ಕಾರಣಕ್ಕಾಗಿ ಹಲವಾರು ಕ್ರೀಡಾಪಟುಗಳು ಬೆಳಕಿಗೆ ಬಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ತಮ್ಮಲ್ಲಿರುವ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಲು ಹೆಚ್ಚು ಅನುಕೂಲವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ತನ್ನ ಅವಧಿಯಲ್ಲಿ ಕ್ರೀಡೆಗೆ ಸಾಧ್ಯವಾದಷ್ಟು ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹ ನೀಡಲು ನಿರ್ಧರಿಸಿದ್ದೇನೆ. ವಾಲಿಬಾಲ್ ಕ್ರೀಡೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಬೇಕಾಗುವ ಎಲ್ಲಾ ಸಹಕಾರ ನೀಡಲು ಸಿದ್ದರಿರುವುದಾಗಿ ಭರವಸೆ ನೀಡಿದ ಪೊನ್ನಣ್ಣನವರು, ಈ ಕುರಿತು ವೈಜ್ಞಾನಿಕವಾಗಿ ಸಮಾಲೋಚಿಸಿ ವಾಲಿಬಾಲ್ ಕ್ರೀಡೆಯ ಉತ್ತೇಜನಕ್ಕೆ ಅಗತ್ಯವಿರುವ ಕಾರ್ಯ ಯೋಜನೆಗಳನ್ನು ರೂಪಿಸಿ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಅವರು ಇದೇ ಸಂದರ್ಭದಲ್ಲಿ ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳಿಗೆ ಸಲಹೆ ನೀಡಿದರಲ್ಲದೆ, ವಾಲಿಬಾಲ್ ಪಂದ್ಯಾವಳಿಯನ್ನು ನಿರಂತರವಾಗಿ ಆಯೋಜಿಸುವ ಮೂಲಕ ಹೊಸ ಪ್ರತಿಭೆಗಳನ್ನು ಮುನ್ನಲೆಗೆ ತರುವಂತೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ಎ. ಹಂಸ ಸಭೆಯಲ್ಲಿ ಮಾತನಾಡಿದರು. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ಹಿರಿಯ ವಾಲಿಬಾಲ್ ಆಟಗಾರರಾದ ಕರೀಂ ಕಡಂಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲೆಯ ಹಿರಿಯ ವಾಲಿಬಾಲ್ ಪಟು ಬಲ್ಲಚಂಡ ಗೌತಮ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮನೆಯಪಂಡ ದೇಚಮ್ಮ, ಮಾಜಿ ಸದಸ್ಯರಾದ ಮತೀನ್, ರಾಫಿ, ಆತಿಫ್ ಮನ್ನಾ, ಕಾಂಗ್ರೆಸ್ ಪಕ್ಷದ ಮಂಜು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ ಅವರನ್ನು ಕೊಡಗು ವಾಲಿಬಾಲ್ ಅಸೋಸಿಯೇಷನ್ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಮೀತಲ್ತಂಡ ಇಸ್ಮಾಯಿಲ್, ಅಮ್ಮಂಡ ಸುಮನ್, ಮುಂಡಚಾಡಿರ ರಜಿತ್, ಕತ್ತಣಿರ ಅಬ್ದುಲ್ ರಹಿಮಾನ್ (ಅಂದಾಯಿ) ಅವರು ಸಭೆಯ ಆಯೋಜನೆಯ ಉಸ್ತುವಾರಿ ವಹಿಸಿದ್ದರು. ಕತ್ತಣಿರ ಅಂದಾಯಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೀತಲ್ತಂಡ ಇಸ್ಮಾಯಿಲ್ ಕಾರ್ಯಕ್ರಮ ನಿರೂಪಿಸಿದರು. ಅಮ್ಮಂಡ ಸುಮನ್ ವಂದಿಸಿದರು. ಸಭೆಯಲ್ಲಿ ಜಿಲ್ಲೆಯ ವಿವಿಧೆಡೆಯ ನೂರಾರು ವಾಲಿಬಾಲ್ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.



