ಬೆಂಬಲ ಬೆಲೆಯಡಿ ಭತ್ತ ಖರೀದಿ ಜಿಲ್ಲೆಯಲ್ಲಿ ಆರಂಭ – ರೈತರ ಹೆಸರು ನೋಂದಣಿಗೆ ಜಿಲ್ಲಾಧಿಕಾರಿ ಮನವಿ

Share this post :

ಮಡಿಕೇರಿ : ‘ಸರ್ಕಾರದ ಬೆಂಬಲ ಬೆಲೆಯಡಿ ಜಿಲ್ಲೆಯಲ್ಲಿ ಭತ್ತ ಹಾಗೂ ರಾಗಿಯನ್ನು ಖರೀದಿ ಮಾಡಲಾಗುತ್ತಿದ್ದು, ಈ ಸಂಬಂಧ ರೈತರ ಹೆಸರು ನೋಂದಣಿ ಕಾರ್ಯ ಈಗಾಗಲೇ ಆರಂಭವಾಗಿದ್ದು, ಜಿಲ್ಲೆಯ ರೈತರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಕೋರಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ೨೦೨೫-೨೬ ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬುಧವಾರ ನಡೆದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಆದೇಶದಂತೆ ೨೦೨೫-೨೬ ನೇ ಸಾಲಿಗೆ ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಹಾಗೂ ರಾಗಿ ಖರೀದಿ ಮಾಡಲಾಗುತ್ತಿದ್ದು, ಈ ಅವಕಾಶ ಸದ್ಬಳಕೆಗೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಭತ್ತ ಮತ್ತು ರಾಗಿಯನ್ನು ಬೆಂಬಲ ಬೆಲೆಯಡಿ ಖರೀದಿಸಲಾಗುತ್ತಿದ್ದು, ಆಹಾರ, ನಾಗರಿಕ ಸರಬರಾಜು ನಿಗಮ ನಿಯಮಿತದವರನ್ನು ಖರೀದಿ ಏಜೆನ್ಸಿಯನ್ನಾಗಿ ಸರಕಾರ ನೇಮಕ ಮಾಡಿದ್ದು, ಖರೀದಿ ಪ್ರಕ್ರಿಯೆ ಇವರ ಮುಖಾಂತರ ನಡೆಯುತ್ತಿದೆ ಎಂದು ವಿವರಿಸಿದರು.
ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲ ಆಗುವಂತೆ ೦೫ ಕಡೆಗಳಲ್ಲಿ ಮಡಿಕೇರಿ ಎಪಿಎಂಸಿ ಆವರಣ, ಕುಶಾಲನಗರ ಎಪಿಎಂಸಿ ಆವರಣ, ಗೋಣಿಕೊಪ್ಪ ಎಪಿಎಂಸಿ ಆವರಣ ಹಾಗೂ ಸೋಮವಾರಪೇಟೆ ಎಪಿಎಂಸಿ ಮಾರ್ಕೇಟ್ ಆವರಣದಲ್ಲಿ ಮತ್ತು ವಿರಾಜಪೇಟೆ ಪಟ್ಟಣದ ತಾಲ್ಲೂಕು ಕೃಷಿ ಇಲಾಖೆ ಕಚೇರಿಯಲ್ಲಿ ಖರೀದಿ ಕೇಂದ್ರ ತೆರೆಯಲಾಗಿದ್ದು, ರೈತರು ನೋಂದಣಿ ಕೇಂದ್ರಗಳಲ್ಲಿಯೇ ತಮ್ಮ ಭತ್ತ ನೀಡುವಂತಾಗಬೇಕು ಎಂದರು.
ರೈತರ ನೋಂದಣಿ ತಾಂತ್ರಿಕ ತೊಂದರೆಗಳು ಕಂಡುಬಂದಲ್ಲಿ ಕೂಡಲೇ ಸರಿಪಡಿಸಬೇಕು. ಆ ನಿಟ್ಟಿನಲ್ಲಿ ಕೃಷಿಕರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿ ಮಾಡಿದ ಭತ್ತದ ಹಾಗೂ ರಾಗಿ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ನೋಂದಣಿ ಕೇಂದ್ರದಲ್ಲಿ ರೈತರು ಫ್ರೂಟ್ ಐಡಿ, ಆಧಾರ್ ಸಂಖ್ಯೆಗೆ ಜೋಡಣೆಯಾದ ತಮ್ಮ ಎನ್‌ಪಿಸಿಐ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕಿದೆ ಎಂದು ಅವರು ತಿಳಿಸಿದರು.
ಭತ್ತದ ಖರೀದಿ ನೋಂದಣಿ ಕುರಿತು ಗ್ರಾಮೀಣ ಭಾಗದಲ್ಲಿ ರೈತರಿಗೆ, ಮುಖಂಡರಿಗೆ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ನೀಡುವಂತೆ ಹಾಗೂ ರೈತರ ನೋಂದಣಿ ಕೇಂದ್ರಗಳು ಹಾಗೂ ಭತ್ತ ಖರೀದಿ ಕೇಂದ್ರಗಳ ಕುರಿತು ವಿವರಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಖರೀದಿ ಏಜೆನ್ಸಿಯವರಿಗೆ ತಿಳಿಸಿದರು.
ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಮಂಟೇಸ್ವಾಮಿ ಅವರು ಮಾಹಿತಿ ನೀಡಿ, ಕೆಲವೇ ದಿನಗಳಲ್ಲಿ ಭತ್ತ/ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‌ಗೆ ೨೩೬೯ ರೂ. ನಿಗದಿಪಡಿಸಲಾಗಿದ್ದು, ರಾಗಿ ಪ್ರತಿ ಕ್ವಿಂಟಲ್‌ಗೆ ೪೮೮೬ ರೂ. ನಿಗದಿಪಡಿಸಲಾಗಿದೆ ಎಂದರು.
ಭತ್ತವನ್ನು ಮಾರಾಟ ಮಾಡಬೇಕಾದ ರೈತರು ಈಗಾಗಲೇ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಒಂದು ವೇಳೆ ರೈತರು ನೋಂದಣಿ ಮಾಡದಿದ್ದಲ್ಲಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು, ತಾವು ಬೆಳೆದ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಡಿ.ಎಸ್.ಸೋಮಶೇಖರ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕರಾದ ಹಂಪಣ್ಣ, ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಕಿರಣ್, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರಾದ ಎಚ್.ಎಂ.ನಾಗನಾಯ್ಕ, ಎಪಿಎಂಸಿ ಕಾರ್ಯದರ್ಶಿ ಅನಿಲ್, ಆಹಾರ ನಿರೀಕ್ಷಕರಾದ ಯಶಸ್ವಿನಿ, ಸ್ವಾತಿ, ವೀಣಾ, ಪಿ.ಆರ್.ನೀನಾಕುಮಾರಿ, ಕಾನೂನು ಮಾಪನ ಶಾಸ್ತç ಇಲಾಖೆಯ ನಿರೀಕ್ಷಕರಾದ ನರೇಂದ್ರ, ಮೈಕಲ್, ಕಿರಣ್, ಇತರರು ಇದ್ದರು.

coorg buzz
coorg buzz