ಬೆಂಗಳೂರು : ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಾಳೆಯಿಂದ(ಆ.05) ಮುಷ್ಕರ ನಡೆಸಲು ಮುಂದಾಗಿದ್ದಾರೆ. ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಆ.04ರೊಳಗೆ ಈಡೇರಿಸುವಂತೆ ನೌಕರರ ಸಂಘಟನೆಗಳು ಆಗ್ರಹಿಸಿದ್ದವು. ಈಡೇರದಿದ್ದರೆ ನಾಳೆಯಿಂದ ಮುಷ್ಕರ ಕೈಗೊಳ್ಳುವುದಾಗಿ ಎಚ್ಚರಿಸಿವೆ.
ಈ ಮಧ್ಯೆ ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ಸಭೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಒಕ್ಕೂಟದೊಂದಿದೆ ವಿಧಾನದೌಧದ ಸಮಿತಿ ಕೊಠಡಿಯಲ್ಲಿ ಸುದೀರ್ಘ ಚರ್ಚೆ ನಡೆಸಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಇಲಾಖಾ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ರಾಹುಲ್ ಆಗಮನ ವೇಳೆ ಮುಜುಗರ..!
ನಾಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಇದೇ ಸಂದರ್ಭ ಮುಷ್ಕರ ನಡೆಯುತ್ತಿರುವುದು ಸರ್ಕಾರಕ್ಕೆ ಸವಾಲಾಗಿದೆ. ರಾಹುಲ್ ಆಗಮನ ವೇಳೆ ಪ್ರತಿಭಟನೆ, ಮುಷ್ಕರ ನಡೆದು ಮುಜುಗರ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಸಂಧಾನ ಸೂತ್ರದ ಮೊರೆ ಹೋಗಿದೆ. ಆದ್ರೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ನಾಳೆ ಮುಷ್ಕರ ಮುಂದುವರೆಸುತ್ತೇವೆ ಅಂತ ಮುಖಂಡರು ಪ್ರತಿಕ್ರಿಯಿಸಿದ್ದಾರೆ.
