ಜೋಪಡಿಯಲ್ಲಿದ್ದ ವೃದ್ಧೆ ಬಾಳಿಗೆ ಬೆಳಕಾದ ವಿದ್ಯಾರ್ಥಿನಿ ಶ್ರೀಶಾ

Share this post :

ಹರದೂರು ಗ್ರಾಮ ಪಂಚಾಯಿತಿಯ ಮುತ್ತಿನ ತೋಟದ ಬಳಿ ಜೋಪಡಿಯಲ್ಲಿದ್ದ ಗಿರಿಜಾ (76) ಅವರಿಗೆ ಸುಸಜ್ಜಿತ ಸೂರು ಒದಗಿಸಿ ಎಳೆಯ ಪ್ರಾಯದಲ್ಲೇ ಮಾನವೀಯತೆ ತೋರಿದ್ದಾರೆ ವಿದ್ಯಾರ್ಥಿನಿ ಶ್ರೀಶಾ.

 ಗುಡಿಸಲಿನಲ್ಲಿ ಸಂಕಷ್ಟದ ಜೀವನ ಸಾಗಿಸುತ್ತಿದ್ದ ವೃದ್ಧ ದಂಪತಿಯ ಸ್ಥಿತಿಯ ಬಗ್ಗೆ ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಶ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರು ಹಾಗೂ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.

 ಇದಕ್ಕೆ ಸ್ಪಂದಿಸಿದ ಸ್ಥಳೀಯ ಪಂಚಾಯಿತಿ ಸದಸ್ಯ ಸಲೀಂ ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. 02 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಮನೆ ನಿರ್ಮಿಸಿ ಕೊಡುವುದಾಗಿ ಹೇಳಿದ್ದರು. ಬಳಿಕ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ ಗೌಡ ಕೂಡಾ ಈ ಬಗ್ಗೆ ಆಸಕ್ತಿ ವಹಿಸಿ, ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ಕೊಟ್ಟರು.

 ಇಬ್ಬರ ಮುತುವರ್ಜಿಯಿಂದ ಮನೆ ಕೆಲಸ ಸಂಪೂರ್ಣಗೊಂಡು ಗಿರಿಜಾ ಅವರಿಗೆ ಹಸ್ತಾಂತರವಾಗಿದೆ. ಇಷ್ಟು ದಿನ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದ ವೃದ್ಧೆ ಇಳಿ ವಯಸ್ಸಿನಲ್ಲದಾದರೂ ಹೊಸ ಮನೆ ಕಾಣುವಂತಾಯಿತಲ್ಲ ಎಂಬ ಸಾರ್ಥಕತೆಯೊಂದಿಗೆ ಗೃಹಪ್ರವೇಶ ಮಾಡಿದ್ದಾರೆ.

 ಈ ಬಗ್ಗೆ ಮಾತನಾಡಿದ ಸಲೀಂ, ಶ್ರೀಶಾ ಮಾಡಿದ ವಿಡಿಯೊ ನಮ್ಮ ಪಂಚಾಯಿತಿಗೆ ಒಂದು ಎಚ್ಚರಿಕೆಯಾಗಿತ್ತು. ಈ ವೃದ್ಧ ದಂಪತಿಗೆ ಸೂರು ಕಟ್ಟಿ-ಕೊಡಬೇಕೆಂಬ ನಿರ್ಧಾರಕ್ಕೆ ಬಂದೆವು. ಅದರಂತೆ ಶಾಸಕರಾದ ಮಂತರ್ ಗೌಡ ಅವರ ಹೆಚ್ಚುವರಿ ಅನುದಾನದಲ್ಲಿ ಮನೆಯ ನಿರ್ಮಾಣ ಕಾರ್ಯ ಮುಗಿಸಿ ಯಶಸ್ವಿಯಾಗಿದ್ದೇವೆ. ಆದರೆ ಇತ್ತೀಚೆಗೆ ಗಿರಿಜಾ ಅವರ ಪತಿ ಮಾಯಿಲ ನಿಧನರಾಗಿದ್ದು ಬೇಸರ ತಂದಿದೆ ಎಂದರು.

ಹೊಸ ಮನೆ ಸ್ವೀಕರಿಸಿ ಮಾತನಾಡಿದ ಗಿರಿಜಾ, ‘ನನ್ನ ಪತಿ ಪ್ರತಿನಿತ್ಯ ಚಾಪೆ ಹಿಡಿದು ಹೊಸ ಮನೆಗೆ ಹೋಗೋಣ ಎನ್ನುತ್ತಿದ್ದರು. ಈಗ ಅವರು ಇಲ್ಲದಿರುವುದು ಬೇಸರ ತಂದಿದೆ. ಅವರು ಈ ಕ್ಷಣ ನನ್ನೊಂದಿಗೆ ಇರಬೇಕಿತ್ತು ಎಂದು ಭಾವುಕರಾದರು.

 ವಿದ್ಯಾರ್ಥಿನಿ ಶ್ರೀಶಾ ಮಾತನಾಡಿ, ಕಳೆದ ವರ್ಷ ಈ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಾಳಿ ಮಳೆಯ ನಡುವೆ ಬದುಕು ಕಟ್ಟಿಕೊಂಡ ಈ ದಂಪತಿ ಪರಿಸ್ಥಿತಿ ಕಂಡು ಬೇಸರವಾಗಿತ್ತು. ವಿಡಿಯೊ ಮಾಡಿ ಸಂಬಂಧಪಟ್ಟವರ ಗಮನ ಸೆಳೆದೆ. ಎಲ್ಲರ ನೆರವಿನಿಂದ ಮನೆ ನಿರ್ಮಾಣವಾಗಿದೆ. ಸಹಾಯಹಸ್ತ ಚಾಚಿದ ಎಲ್ಲರಿಗೂ ಧನ್ಯವಾದ ಎಂದು ಕೃತಜ್ಞತೆ ಅರ್ಪಿಸಿದರು.

coorg buzz
coorg buzz