ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿದ್ದ ಸಮರಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಹೈಕಮಾಂಡ್ ಸೂಚನೆ ಮೇರೆಗೆ ಇಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಉಪಹಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಗೊಂದಲ ತಾತ್ಕಾಲಿಕವಾಗಿ ಬಗೆಹರಿದಿರುವ ಬಗ್ಗೆ ಸ್ಪಷ್ಟಪಡಿಸಿದರು.
ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಿಂದೆಯೂ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ ಮುಂದೆಯೂ ಇಲ್ಲ. ಅನಗತ್ಯವಾಗಿ ಕೆಲವು ಗೊಂದಲ ನಿರ್ಮಾಣವಾಗಿದೆ ಎಂದರು.
2023ರ ಚುನಾವಣೆಯಲ್ಲಿ ನಾವಿಬ್ಬರು ಹೇಗೆ ಜೊತೆಗೆ ಹೋಗಿದ್ದೆವೋ ಅದೇ ರೀತಿ 2028ರ ಚುನಾವಣೆಯಲ್ಲಿ ಒಟ್ಟಿಗೆ ಹೋಗುತ್ತೇವೆ. ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಕೇಳುತ್ತೇವೆ ನಾವಿಬ್ಬರೂ ನಡೆದುಕೊಳ್ಳುತ್ತೇವೆ. ಹೈಕಮಾಂಡ್ ಗೊಂದಲ ತಿಳಿ ಮಾಡುವ ಕೆಲಸ ಮಾಡಿತ್ತು. ನಾಳೆಯಿಂದ ಯಾವುದೇ ಗೊಂದಲ ಇರಲ್ಲ ಎಂದು ಹೇಳಿದರು.
ನಾನು ಸಂಪುಟ ಪುನಾರಚನೆ ಮಾಡುತ್ತೇನೆ ಎಂದು ಹೇಳಿದ್ದೆ. ಈ ಕಾರಣಕ್ಕೆ ಕೆಲವು ಶಾಸಕರು ಮಂತ್ರಿ ಮಾಡಿ ಎಂದು ದೆಹಲಿಗೆ ಹೋಗಿದ್ದರು. ನಾಯಕತ್ವ ವಿರುದ್ಧವಾಗಿ ಶಾಸಕರು ದೆಹಲಿಗೆ ಹೋಗಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.



