ಆತ್ಮೀಯ ಪೋಷಕರೇ, ಕೆಲವು ದಿನಗಳಿಂದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ ಯು ತೇರ್ಗಡೆಗೊಂಡ ವಿದ್ಯಾರ್ಥಿಗಳ ಪೋಷಕರಿಗೆ 8867388278 (ಟ್ರೂ ಕಾಲರ್’ನಲ್ಲಿ ದೀಪ ಗೌಡ ಎಂಬ ಹೆಸರು ಬರುತ್ತಿದೆ) ಎಂಬ ಸಂಖ್ಯೆಯಿಂದ ಕರೆಗಳು ಬರುತ್ತಿದ್ದು, ತಮ್ಮ ಮಗ/ಮಗಳಿಗೆ ಎಸ್ ಎಸ್ ಎಲ್ ಸಿ/ ಪಿ ಯು ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿರುವುದರಿಂದ ಸಾಂಸಂಗ್ ಕಂಪನಿಯ ವತಿಯಿಂದ ಸುಮಾರು ರೂ ಐವತ್ತು ಸಾವಿರ ಬೆಲೆ ಬಾಳುವ ಲ್ಯಾಪ್ಟಾಪ್ (laptop) ಉಚಿತವಾಗಿ ನೀಡುತ್ತಿದ್ದು, ವಿದ್ಯಾರ್ಥಿಗಳೊಂದಿಗೆ ಪೋಷಕರು ಖುದ್ದಾಗಿ ಬೆಂಗಳೂರಿಗೆ ತೆರಳಿ ಅಥವಾ ತಮ್ಮ ವಿಳಾಸವನ್ನು ನೀಡಿದರೆ ಅಲ್ಲಿಗೆ ಕಳುಹಿಸುವುದಾಗಿ ತಿಳಿಸುತ್ತಿದ್ದಾರೆ. ಇದನ್ನು ಪಡೆಯಲು ಜಿ ಎಸ್ ಟಿ ಮತ್ತು ಡೆಲಿವರಿ ಶುಲ್ಕ ರೂ 999/- ನ್ನು ಪಾವತಿಸಲು ಸೂಚಿಸುತ್ತಿದ್ದು ಹಲವಾರು ಪೋಷಕರು ವಂಚನೆಯ ಈ ಬಲೆಗೆ ಬಿದ್ದು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಸಾಂಸಂಗ್ ಕಂಪನಿಯ ವತಿಯಿಂದ ಇಂತಹ ಯಾವುದೇ ಬಹುಮಾನವನ್ನು ನೀಡುತ್ತಿಲ್ಲ ಮತ್ತು ಕರ್ನಾಟಕ ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ನೀಡುವ ಲ್ಯಾಪ್ಟಾಪ್ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಉಪನಿರ್ದೇಶಕರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನೀಡುತ್ತಾರೆಯೇ ಹೊರತು ಬೆಂಗಳೂರಿಗೆ ತೆರಳಿ ಪಡೆಯಲು ಅಥವಾ ಮನೆಗೆ ಡೆಲಿವರಿ ಮಾಡುವುದಾಗಿ ತಿಳಿಸುವುದಿಲ್ಲ. ಕೆಲವು ಪೋಷಕರು ಈ ವಿಷಯವನ್ನು ನನ್ನ ಗಮನಕ್ಕೆ ತಂದಾಗ ನಾನು ಮೇಲೆ ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಇದೊಂದು ಹೊಸ ವಂಚನೆ ಎಂದು ತಿಳಿದುಬಂದಿದೆ. ಸದರಿ ವಿಷಯವನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ. ಸೈಬರ್ ವಂಚಕರು ಆಸೆ ಆಮಿಷ ತೋರಿಸಿ ಇಂತಹ ಹೊಸ ಹೊಸ ವಂಚನೆಯ ಉಪಾಯದೊಂದಿಗೆ ನಿಮ್ಮನ್ನೂ ಸಂಪರ್ಕಿಸಬಹುದು. ಆದ್ದರಿಂದ ಇಂತಹ ಕರೆಗಳು ಬಂದಂತಹ ಸಂಧರ್ಭದಲ್ಲಿ ಪ್ರತೀ ಪೋಷಕರೂ ವ್ಯಾಮೋಹಕ್ಕೆ ಒಳಗಾಗದೆ ಜಾಗರೂಕರಾಗಿ ಮತ್ತು ವಂಚನೆಗೆ ಬಲಿಯಾಗಬೇಡಿ.
✍🏻 ತನ್ವೀರ್ ಕೆ ಸಿ
ಪ್ರಾಂಶುಪಾಲರು
ರಾಫಲ್ಸ್ ಇಂಟರ್ನ್ಯಾಷನಲ್ ಇಂಗ್ಲೀಷ್ ಸ್ಕೂಲ್ ಮತ್ತು ಪಿ ಯು ಕಾಲೇಜು
ಹೊದವಾಡ, ನಾಪೋಕ್ಲು