ಮಡಿಕೇರಿ : ಕಡಗದಾಳುವಿನ ಕುರುಳಿ ಅಂಬಲ ಮಂದ್‌ನಲ್ಲಿ ಪುತ್ತರಿ ಕೋಲಾಟ್ ಸಾಂಪ್ರದಾಯಿಕವಾಗಿ ಮಂಗಳವಾರ ನಡೆಯಿತು. ಡಿಸೆಂಬರ್ 03ರ ಸಂಜೆ ಈಡ್, ಡಿ.7 ಭಾನುವಾರ ಮುಂಜಾನೆ ಮಂದ್ ತೊರ್‌ಪ, ಡಿ 9ರ ಮಂಗಳವಾರ ಊರಿನವರು ಮಂದ್‌ನಲ್ಲಿ ಸೇರಿ ಮಧ್ಯಾಹ್ನ 12 ಗಂಟೆಗೆ ಊರ್ ತಕ್ಕರ ಮನೆಗೆ ತೆರಳಿ ಫಲಹಾರ ಊಟೋಪಚಾರದ ನಂತರ ತಳಿಯಕ್ಕಿ ಬೊಳ್‌ಚ, ದುಡಿಕೊಟ್ಟ್ ಪಾಟ್, ಒಡ್ಡೋಲಗದೊಂದಿಗೆ ಊರ್ ತಕ್ಕರನ್ನು ಮಂದ್‌ಗೆ ಕರೆ ತಂದರು. ನಂತರ ಊರ್ ಕೋಲ್ ನಡೆಯಿತು.
3 ಗಂಟೆಗೆ ದೇಶ ತಕ್ಕರನ್ನು ಹಾಗು ನಾಡಿನ ತಕ್ಕರನ್ನು ಮಂದ್‌ಗೆ ಕರೆತಂದು ಸತ್ಕರಿಸಲಾಯಿತು. ಮೂಲನೆಲೆಯಲ್ಲಿ ದೇವರನ್ನು ಪ್ರಾರ್ಥಿಸಿ ನಾಡ್ ಕೋಲ್, ಬಾಳೋಪಾಟ್, ಬೊಳಕಾಟ್, ಪರೆಯ ಕಳಿ, ವಾಲಗತ್ತಾಟ್ ನಡೆಯಿತು. ಬಳಿಕ ಊರುತಕ್ಕರನ್ನು ತಕ್ಕರ ಮನೆಗೆ ಬೀಳ್ಕೊಡಲಾಯಿತು. ಮಂದ್ ಸಮಿತಿಯ ಅಧ್ಯಕ್ಷ ಮಾದೇಟಿರ ಬೆಳ್ಳಪ್ಪ, ಊರಿನ ತಕ್ಕರಾದ ಕೊರವಂಡ ರಾಮು ಅಯ್ಯಪ್ಪ, ಏಳು ನಾಡಿನ ತಕ್ಕಮುಖ್ಯಸ್ಥರು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪುರಾತನ ನ್ಯಾಯ ತೀರ್ಮಾನದ ನೆಲೆಯೆಂದೇ ಪ್ರಸಿದ್ದಿ ಪಡೆದ ಹಾಗೂ ಜಿಲ್ಲೆಯ ಕೊನೆಯ ಪುತ್ತರಿ ಕೋಲಾಟ್ ಇದಾಗಿದ್ದು ಪುತ್ತರಿ ಕಳೆದ ಐದನೇ ದಿನ ನಾಡು ಕೋಲಾಟ ಮುಗಿದು ಮಾರನೇಯ ದಿನ ದೇವರ ನೆಲೆಯಲ್ಲಿ ಕೋಲು ಒಪ್ಪಿಸಿದ ನಂತರ ಕೊಡಗಿನ ಮತ್ತೆಲ್ಲೂ ಕೋಲಿನ ಸದ್ದು ಕೇಳುವಂತಿಲ್ಲ.
✍️ ವರದಿ : ಪುತ್ತರೀರ ಕರುಣ್ ಕಾಳಯ್ಯ



