ವೀರಾಜಪೇಟೆ : ಹೆಚ್ಐವಿ / ಏಡ್ಸ್ ಕುರಿತು ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿದಾಗ ಮಾತ್ರ ಅದರ ಸಂಪೂರ್ಣ ನಿರ್ಮೂಲನೆ ಸಾಧ್ಯ ಎಂದು ಕೊಡಗು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿ ಡಾ. ಸನತ್ ಕುಮಾರ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಪಂಚಾಯತ್, ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಂಷನ್ ಸೊಸೈಟಿ, ವಿರಾಜಪೇಟೆ ತಾಲೂಕು ಆರೋಗ್ಯ ಇಲಾಖೆ ಹಾಗೂ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್, ರೆಡ್ ರಿಬ್ಬನ್ ಘಟಕ, ಯುವ ರೆಡ್ ಕ್ರಾಸ್ ಘಟಕ, ವಯುಕ್ತಿಕ ಕೌನ್ಸೆಲ್ಲಿಂಗ್ ಘಟಕಗಳ ಸಹಯೋಗದಲ್ಲಿ ಸೆಂಟ್ ಆನ್ಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಏಡ್ಸ್ ಕುರಿತು ಆರೋಗ್ಯ ಇಲಾಖೆ, ಏಡ್ಸ್ ನಿಯಂತ್ರಣ ಘಟಕಗಳು ಅದರ ಜೊತೆಗೆ ರೆಡ್ ರಿಬ್ಬನ್ ಕ್ಲಬ್‌ನಂತಹ ಘಟಕಗಳು ಸಮಾಜದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿವೆ. ಯುವ ಜನತೆ ತಾವು ಜಾಗೃತರಾಗುವ ಜೊತೆಗೆ ಬೇರೆಯವರಲ್ಲಿಯೂ ಜಾಗೃತಿ ಮೂಡಿಸಬೇಕು. ಏಡ್ಸ್‌ನ ಆರಂಭಿಕ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದರು.
ನಾವುಗಳು ಜಾಗ್ರತರಾದಾಗ ಮಾತ್ರ ಸಮಾಜದಲ್ಲಿ ಇತರರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೆಂದರು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಗೃತಿಯನ್ನು ಮೂಡಿಸಿ ಎಂದು ಕರೆಕೊಟ್ಟರು.
ಪದವಿ ಕಾಲೇಜಿನ ವ್ಯವಸ್ಥಾಪಕ ರೆ. ಫಾ. ಮದಲೈ ಮುತ್ತು ಮಾತನಾಡಿ, ಪ್ರತಿಯೊಬ್ಬರೂ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಜೀವಿಸಬೇಕು. ಮನುಷ್ಯನು ಯೋಚನಾ ಶಕ್ತಿಯನ್ನು ಹೊಂದಿದ್ದು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಾವು ನಮ್ಮ ಆರೋಗ್ಯವನ್ನು ಕಾಪಾಡುವ ಜೊತೆಗೆ ಸಾಮಾಜಿಕ ಪ್ರಜ್ಞೆಯನ್ನು ಮರೆಯಬಾರದು. ಉತ್ತಮ ಸಮಾಜಮುಖಿ ಚಟುವಟಿಕೆಗಳಿಂದ ಜೀವನ ನಡೆಸಬೇಕು. ಏಡ್ಸ್ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹತ್ತು ಹಲವು ಜಾಗೃತ ಕಾರ್ಯಕ್ರಮ ಆಯೋಜಿಸಲ್ಪಡುತ್ತಿದ್ದು ಪ್ರತಿಯೊಬ್ಬರಲ್ಲಿಯೂ ಅದರ ಅರಿವು ಅತಿ ಮುಖ್ಯ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಸುನಿತಾ ಮುತ್ತಣ್ಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಉತ್ತಮ ಆರೋಗ್ಯದಿಂದ ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗುತ್ತದೆ. ಜಿಲ್ಲಾದ್ಯಂತ ಒಟ್ಟು 20 ಪದವಿ ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್ ಘಟಕಗಳಿದ್ದು, ಆ ಮುಖಾಂತರ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು.
ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕ ಚಿಟ್ಟಿಯಪ್ಪ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ವಿಭಾಗದ ಆಪ್ತಸಮಾಲೋಚಕ ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಎನ್ಎಸ್ಎಸ್ ಘಟಕದ ಅಧಿಕಾರಿ ಬಿ.ಎನ್. ಶಾಂತಿಭೂಷಣ್ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಕಿ ಪ್ರತಿಮಾ ಹರೀಶ್ ರೈ ಸ್ವಾಗತಿಸಿದರು. ಎನ್ಎಸ್ಎಸ್ ಘಟಕದ ವಿದ್ಯಾರ್ಥಿನಿ ಮೇಘನಾ ನಿರೂಪಿಸಿದರು. ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ವಂದಿಸಿದರು.



