ಮಡಿಕೇರಿ : 08ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಅಂಗವಾಗಿ ನವೆಂಬರ್ ೧೦ ರಿಂದ ನವಂಬರ್ ೧೮ರವರೆಗೆ ಕೊಡಗು ಜಿಲ್ಲೆಯಲ್ಲಿ ನಡೆದ ಪ್ರಕೃತಿ ಚಿಕಿತ್ಸಾ ಜಾಗೃತಿ ಶಿಬಿರದ ಸಮಾರೋಪ ಸಮಾರಂಭ ನಗರದ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ನಡೆಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೇಂದ್ರ ಆಯುಷ್ ಇಲಾಖೆ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಹಾಗೂ ಭಾರತೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದವೀಧರರ ಸಂಘ ಇವರ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮತ್ತು ಆಸ್ಪತ್ರೆ ಉಜಿರೆ ವತಿಯಿಂದ ರಾಜ್ಯದ ೨೩೬ ತಾಲೂಕುಗಳಲ್ಲಿ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕೊಡಗು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ೩೩ ಕ್ಕೂ ಹೆಚ್ಚು ಶಿಬಿರಗಳನ್ನು ಹಮ್ಮಿಕೊಂಡಿದ್ದು, ೧,೩೦೦ಕ್ಕೂ ಹೆಚ್ಚು ಜನರಲ್ಲಿ ಆರೋಗ್ಯ ಜಾಗೃತಿ ಹಾಗೂ ಪ್ರಕೃತಿ ಚಿಕಿತ್ಸೆಯ ಕುರಿತು ಮಾಹಿತಿಯನ್ನು ನೀಡುವಲ್ಲಿ ಡಾ.ಅನನ್ಯ, ಎನ್.ಲೇಖ, ಶೋಭಿತ ಎಂ. ಸ್ನೇಹ, ಆನಂದ್, ದೀಕ್ಷ, ಕುನಲ್ ದೇವಯ್ಯ, ವೈದ್ಯರ ತಂಡ ಯಶಸ್ವಿಯಾಗಿದೆ,
ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ನೆರವೇರಿಸಿ, ಪೋಷಕರು ಮಕ್ಕಳಿಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೈಲಜಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವನ ಸರ್ವತೋಮುಖ ಸ್ವಾಸ್ಥ ಕಾಪಾಡುವ ಆಯುಷ್ ಪ್ರಕೃತಿ ಚಿಕಿತ್ಸಾ ವಿಧಾನವನ್ನು ಬಳಸುವಂತೆ ಮಾರ್ಗದರ್ಶನ ನೀಡಿದರು.
ಆಯುಷ್ ಇಲಾಖೆ ಆಡಳಿತ ಅಧಿಕಾರಿ ಕಾವೇರಪ್ಪ, ಯೋಗ ಶಿಕ್ಷಕ ಕೆ.ಕೆ. ಮಹೇಶ್ ಕುಮಾರ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಆಯುಷ್ ವಿಭಾಗದ ವೈದ್ಯಾಧಿಕಾರಿ ಡಾ.ಅರುಣ್ ಅವರು ಶಿಬಿರದ ವರದಿ ಮಂಡಿಸಿದರು. ಡಾ. ಅನನ್ಯ ವಂದಿಸಿದರು. ಲೇಖ ಎನ್. ಕಾರ್ಯಕ್ರಮ ನಿರೂಪಿಸಿದರು.



