ತಂತಿ ಬೇಲಿಗೆ ಸಿಲಿಕಿಕೊಂಡಿದ್ದ ಚಿರತೆಯನ್ನು (Leopard) ರಕ್ಷಿಸಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಮಾಳೇಟಿರ ಗೌತಮ್ ರವರ ಕಾಫಿ ತೋಟದಲ್ಲಿ ನಡೆದಿದೆ. ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಇಂದು ಬೆಳಿಗ್ಗೆ ಆಹಾರ ಅರಸಿ ಬಂದಿದ್ದ ಚಿರತೆ ತೋಟದ ಬೇಲಿಯೊಳಗೆ ನುಸುಳಿ ತಂತಿಗಳ ನಡುವೆ ಬಂಧಿಯಾಗಿದೆ. ತಂತಿ ಬೇಲಿಯಿಂದ ಹೊರ ಬರಲಾಗದೇ ಜೀವ ಉಳಿಸಿಕೊಳ್ಳಲು ಶತ ಪ್ರಯತ್ನ ಪಡುತ್ತಿರುವುದನ್ನು ಗಮನಿಸಿದ ತೋಟದ ಮಾಲೀಕರಾದ ಮಾಳೇಟಿರ ಗೌತಮ್ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯರವರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಬಂದ ಸಂಕೇತ್ ಪೂವಯ್ಯ, ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅರವಳಿಕೆ ತಜ್ಞರು ಹಾಗೂ ಪಶು ವೈದ್ಯರು ಚಿರತೆಯ ಜೀವ ಉಳಿಸುವ ಕಾರ್ಯಾಚರಣೆಗೆ ಮುಂದಾದರು. ಅರವಳಿಕೆ ನೀಡಿ ಪ್ರಜ್ಞೆ ತಪ್ಪಿಸಿ ತಂತಿ ಬೇಲಿಯಿಂದ ಚಿರತೆಯನ್ನು ಹೊರಕ್ಕೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಚಿರತೆ ಚೇತರಿಕೆ ಕಂಡ ನಂತರ ನಾಗರಹೊಳೆ ಅಭಯಾರಣ್ಯಕ್ಕೆ ಚಿರತೆಯನ್ನು ಸ್ಥಳಾಂತರಿಸಲಾಗಿದೆ.



