ಪೊನ್ನಂಪೇಟೆ: ಒಂದು ಕಾಲದಲ್ಲಿ ರಾಜ ಮನೆತನದವರ ಐಷಾರಾಮಿ ಕ್ರೀಡೆಯಾಗಿದ್ದ ಶೂಟಿಂಗ್ ಇಂದು ಜನಸಾಮಾನ್ಯರ ಕ್ರೀಡೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಶೂಟಿಂಗ್ಸ್ ಸ್ಪರ್ಧೆಗಳು ಇತ್ತೀಚಿಗೆ ವ್ಯಾಪಕವಾಗಿ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಈ ಕಾರಣದಿಂದ ಕೊಡಗಿನಿಂದ ಮತ್ತಷ್ಟು ಶೂಟರ್ಸ್ ಗಳು ಉದಯಿಸುವ ಭರವಸೆಯಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಹೇಳಿದರು.
ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಬಿಟ್ಟಂಗಾಲ ಸಮೀಪದ ಕಂಡಂಗಾಲದ ಜಿಎಂಪಿ ಶಾಲಾ ಮೈದಾನದಲ್ಲಿ ಭಾನುವಾರದಂದು ನಡೆದ ಕೊಡವ ಮುಸ್ಲಿಂ ಮನೆತನಗಳ ನಡುವಿನ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೊದಲನೇ ವರ್ಷದ ಕೌಟುಂಬಿಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಕ್ರೀಡೆಯಲ್ಲಿ ಶೂಟಿಂಗ್ ವೈವಿಧ್ಯಮಯ ಇತಿಹಾಸವನ್ನು ಹೊಂದಿದೆ. ಜನಸಾಮಾನ್ಯರಲ್ಲಿ ಪ್ರಮುಖ ಸ್ಪರ್ಧಾತ್ಮಕ ಕ್ರೀಡೆಯಾಗಿರುವ ಈ ಶೂಟಿಂಗ್ ಇಂದು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೊಡಗಿನಲ್ಲಿ ಶೂಟಿಂಗ್ ಕ್ರೀಡೆಯನ್ನು ಮತ್ತಷ್ಟು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕಾಗಿದೆ. ಜೊತೆಗೆ ಪೋಲಿಸ್ ಇಲಾಖೆ ನಾಗರಿಕರಿಗೆ ಆತ್ಮರಕ್ಷಣೆಗಾಗಿ ಬಂದೂಕು ತರಬೇತಿ ನೀಡುವ ಕಾರ್ಯವನ್ನು ಕನಿಷ್ಠ ಪ್ರತಿ ಆರು ತಿಂಗಳಿಗೊಮ್ಮೆಯಾದರೂ ಆಯೋಜಿಸಬೇಕು. ಈ ತರಬೇತಿಗಳಿಂದ ಇನ್ನಷ್ಟು ಶೂಟರ್ಸ್ ಗಳು ಮೂಡಿಬರಲು ಅವಕಾಶವಾಗುತ್ತದೆ ಎಂದು ಸಲಹೆ ನೀಡಿರುವ ಸೂಫಿ ಹಾಜಿ, ಕೆ.ಎಂ.ಎಸ್.ಎ. ವತಿಯಿಂದ ಇದೇ ಮೊದಲ ಬಾರಿಗೆ ನಡೆದ ಕೊಡವ ಮುಸ್ಲಿಂ ಕೌಟುಂಬಿಕ ಶೂಟಿಂಗ್ ಸ್ಪರ್ಧೆ ಸಮುದಾಯದಲ್ಲಿ ಹೆಚ್ಚು ಶೂಟರ್ಸ್ ಗಳನ್ನು ತಯಾರು ಮಾಡಲು ನಾಂದಿಯಾಗಲಿ. ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಶೂಟರ್ಸ್ ಗಳನ್ನು ಆಯ್ಕೆ ಮಾಡಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವಲ್ಲಿ ಕೆ.ಎಂ.ಎಸ್.ಎ. ವಿಶೇಷ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತೂಕ್ ಬೊಳಕ್ ಕಲೆ ಕ್ರೀಡೆ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮುಲ್ಲೇoಗಡ ಶಂಕರಿ ಪೊನ್ನಪ್ಪ ಮಾತನಾಡಿ, ಪ್ರೀತಿ ವಿಶ್ವಾಸದಿಂದ ಜನರು ಪರಸ್ಪರ ಒಂದುಗೂಡಿದರೆ ಸಮಾಜದಲ್ಲಿ ಸಹೋದರತೆ ಬಲಗೊಳ್ಳುತ್ತದೆ. ಸಾಮರಸ್ಯ ಹೆಚ್ಚಿಸುವಲ್ಲಿ ಕ್ರೀಡಾಕೂಟಗಳ ಪಾತ್ರ ಮಹತ್ವದ್ದು. ಆದ್ದರಿಂದ ಕ್ರೀಡಾಕೂಟಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಕಂಡಂಗಾಲ ಜಿಎಂಪಿ ಶಾಲೆಯ ಕ್ರೀಡಾ ಸಮಿತಿಯ ಅಧ್ಯಕ್ಷರಾದ ಬಲ್ಲಡಿಚoಡ ರವಿ, ಸಲಹೆಗಾರರಾದ ಕೊಂಗಡ ಭೀಮಯ್ಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷರಾದ ಆಲೀರ ರಶೀದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ನಿರ್ದೇಶಕರಾದ ಚಿಮ್ಮಿಚ್ಚಿರ ಇಬ್ರಾಹಿಂ ಹಾಜಿ, ಕಂಡಂಗಾಲ ಜುಮಾ ಮಸೀದಿ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಮಂದಮಾಡ ಮಹಮದ್, ಕೆ.ಎಂ.ಎಸ್.ಎ. ಉಪಾಧ್ಯಕ್ಷರಾದ ಕೆಂಗೋಟಂಡ ಎಸ್. ಸೂಫಿ, ಕುಂಡಂಡ ರಜ್ಹಾಕ್, ಕೋಶಾಧಿಕಾರಿ ಅಬ್ದುಲ್ ಅಜ್ಹಿಜ್ಹ್ ಸೇರಿದಂತೆ ಅಕಾಡೆಮಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕೆ.ಎಂ.ಎಸ್.ಎ. ಪ್ರಧಾನ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಅಕಾಡೆಮಿಯ ಕ್ರೀಡಾ ಸಂಚಾಲಕರಾದ ಕತ್ತಣಿರ ಅಂದಾಯಿ ವಂದಿಸಿದರು. ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ದಿನಗಳಿಂದ ಆಗಮಿಸಿದ ನೂರಾರು ಸ್ಪರ್ಧಿಗಳು ಪಾಲ್ಗೊಂಡಿದ್ದರು.



