ಡಿ. 21ರಿಂದ ವಿ.ಬಾಡಗದಲ್ಲಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ

Share this post :

ಪೊನ್ನಂಪೇಟೆ: ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ತಂಡದ ವತಿಯಿಂದ ವಿಯೋಮನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ ಸಹ ಪ್ರಾಯೋಜಕತ್ವದಲ್ಲಿ 4ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಪ್ಲೈಯರ್ಸ್ ಕಪ್-2025 ಅನ್ನು ಇದೇ ಡಿ.21ರಿಂದ 25ರವರೆಗೆ ಆಯೋಜಿಸಲಾಗಿದೆ. ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬಗಳ ತಂಡಗಳಿಗಾಗಿ ಈ ಹಾಕಿ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ವಿ. ಬಾಡಗ ಹೈಪ್ಲೈಯರ್ಸ್ ತಂಡದ ಅಧ್ಯಕ್ಷರಾದ ಅಮ್ಮಣಿಚಂಡ ರಂಜು ಪೂಣಚ್ಚ ಅವರು ತಿಳಿಸಿದ್ದಾರೆ.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕೌಟುಂಬಿಕ ಹಾಕಿ ಪಂದ್ಯಾವಳಿಯು ವಿ. ಬಾಡಗ ಗ್ರಾಮದಲ್ಲಿ 4ನೇ ಬಾರಿಗೆ ಜರುಗುತ್ತಿದೆ. ವಿ.ಬಾಡಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಟ್ಟು 5 ದಿನಗಳ ಕಾಲ ನಡೆಯುವ ಈ ಹಾಕಿ ಪಂದ್ಯಾವಳಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿರುವುದಾಗಿ ರಂಜು ಪೂಣಚ್ಚ ಮಾಹಿತಿ ನೀಡಿದರು.

ಕುಟುಂಬ ತಂಡಗಳಲ್ಲಿ ಗರಿಷ್ಠ 4 ಅತಿಥಿ ಆಟಗಾರರು ಭಾಗವಹಿಸಬಹುದಾಗಿದೆ. ಆದರೆ ಅತಿಥಿ ಆಟಗಾರರು ಕಡ್ಡಾಯವಾಗಿ ಕೊಡವ ಆಟಗಾರರಾಗಿರಬೇಕು. ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಮತ್ತು ಕೊಡವ ಸಾಂಪ್ರದಾಯಿಕ ಪಾರಿತೋಷಕಗಳನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿರುವ ರಂಜು ಪೂಣಚ್ಚ, ಕ್ರೀಡಾ ಪ್ರೇಮಿಗಳ ಆರ್ಥಿಕ ನೆರವಿನಿಂದ ಕಳೆದ ಮೂರು ವರ್ಷ ಪಂದ್ಯಾವಳಿ ಯಶಸ್ವಿಯಾಗಿ ನಡೆದಿದೆ. ಈ ಬಾರಿಯೂ ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಪಂದ್ಯಾವಳಿ ಜರುಗಲಿದ್ದು, ಗ್ರಾಮಸ್ಥರು ಮತ್ತು ಪ್ರಾಯೋಜಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಹಾಕಿ ಪಂದ್ಯಾವಳಿಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಈ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ಹೈ ಫ್ಲೈಯರ್ಸ್ ಎಂಬ ಕ್ರೀಡಾ ಸಂಸ್ಥೆಯನ್ನು ಕಳೆದ 3 ವರ್ಷಗಳ ಹಿಂದೆ ಹುಟ್ಟು ಹಾಕಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಹಾಕಿ ಪಂದ್ಯಾವಳಿಯನ್ನು ನಿರಂತರವಾಗಿ ಆಯೋಜಿಸುವುದರಿಂದ ಹಾಕಿ ಕ್ರೀಡೆಗೆ ಮತ್ತಷ್ಟು ಉತ್ತೇಜನ ದೊರೆತಂತಾಗುತ್ತದೆ. ಅಲ್ಲದೆ, ಗ್ರಾಮೀಣ ಮಟ್ಟದ ಕ್ರೀಡಾಕೂಟಗಳಿಂದ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ದೊರೆತಂತಾಗುತ್ತದೆ ಎಂದು ರಂಜು ಪೂಣಚ್ಚ ವಿವರಿಸಿದರು.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕ್ರೀಡಾ ಕಾರ್ಯದರ್ಶಿ ಕುಪ್ಪಂಡ ದಿಲನ್ ಬೋಪಣ್ಣ ಮಾತನಾಡಿ, ಹಾಕಿ ಕೂರ್ಗ್ ಸಂಸ್ಥೆಯ ಅಧೀನದಲ್ಲಿ ನಡೆಯಲಿರುವ ಈ ಹಾಕಿ ಪಂದ್ಯಾವಳಿಯು ಹಾಕಿ ಕರ್ನಾಟಕ ಸಂಸ್ಥೆಯ ನಿಯಮಾವಳಿಗೆ ಬದ್ಧವಾಗಿ ನಾಕ್ ಔಟ್ ಮಾದರಿಯಲ್ಲಿ ನಡೆಯಲಿದೆ. ಕಳೆದ ಬಾರಿ ಆಯೋಜಿಸಿದ್ದ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಒಟ್ಟು 18 ಕುಟುಂಬ ತಂಡಗಳು ಭಾಗವಹಿಸಿದ್ದವು. ಈ ಬಾರಿ 20ಕ್ಕೂ ಹೆಚ್ಚಿನ ತಂಡಗಳನ್ನು ನಿರೀಕ್ಷಿಸಲಾಗಿದೆ. ಈಗಾಗಲೇ 12 ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಆಸಕ್ತ ಕುಟುಂಬ ತಂಡಗಳು ಪಂದ್ಯಾವಳಿಗೆ ಹೆಸರು ನೋಂದಾಯಿಸಲು ಇದೇ ಡಿಸೆಂಬರ್ 15ರಂದು ಕೊನೆಯ ದಿನವಾಗಿರುತ್ತದೆ. ಡಿ. 16ರಂದು ಪಂದ್ಯಾವಳಿಯ ಟೈಸ್ ಅನ್ನು ಅಂತಿಮಗೊಳಿಸಲಾಗುವುದು. ಪಂದ್ಯಾವಳಿಯ ಕುರಿತ ಹೆಚ್ಚಿನ ಮಾಹಿತಿಗಾಗಿ 9481883738 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷರಾದ ಮಳವಂಡ ಗಿರೀಶ್ ಮುದ್ದಯ್ಯ, ಕಾರ್ಯದರ್ಶಿ ಮಚ್ಚಾರಂಡ ಪ್ರವೀಣ್ ತಿಮ್ಮಯ್ಯ, ಕೋಶಾಧಿಕಾರಿ ಚೇಮಿರ ನಂದಾ ನಂಜಪ್ಪ ಉಪಸ್ಥಿತರಿದ್ದರು.

coorg buzz
coorg buzz