ಕೋವಿ ಕೊಡವರ ಸಂಪ್ರದಾಯದ ಅವಿಭಾಜ್ಯ ಅಂಗ: ಅರುಣ್ ಮಾಚಯ್ಯ

Share this post :

ಪೊನ್ನಂಪೇಟೆ: ಪೂಜ್ಯನೀಯ ಸ್ಥಾನದಲ್ಲಿರುವ ಕೋವಿ ಕೊಡವರ ಪುರಾತನ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ಕೊಡವರ ಸಂಸ್ಕೃತಿ ಮತ್ತು ಪದ್ಧತಿ ಪರಂಪರೆಯಿಂದ ಕೋವಿಯನ್ನು ಹೊರತುಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ಹೇಳಿದರು.

ಮಾಯಾಮುಡಿಯ ರಿಮ್ ಫೈರ್ ಶೂಟರ್ಸ್ ಹಾಗೂ ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಮಾಯಮುಡಿಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಸ್ಪರ್ಧೆ ತೋಕ್ ನಮ್ಮೆ 2025 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿ ಕೊಡಗಿನವರಿಗೆ ಕೇವಲ ಶಸ್ತ್ರಾಸ್ತ್ರ ಮಾತ್ರವಲ್ಲ. ಅದು ತಮ್ಮ ಸಾಂಸ್ಕೃತಿಕ ಬದುಕಿನ ಒಂದು ಭಾಗವಾಗಿದೆ. ಪೂರ್ವಜರು ಕೋವಿಗೆ ಅತಿ ಮಹತ್ವದ ಸ್ಥಾನವನ್ನು ನೀಡುತ್ತಿದ್ದರು. ಮನೆಯ ಯಾವ ದಿಕ್ಕಿನಲ್ಲಿ ಕೋವಿಯನ್ನು ಇಡಬೇಕು ಎಂಬುದನ್ನು ಕೂಡ ಹಿರಿಯರು ಕಲಿಸಿಕೊಟ್ಟಿದ್ದಾರೆ. ಆದ್ದರಿಂದ ಇಂದಿನ ಯುವ ಪೀಳಿಗೆ ಈ ಕೋವಿಯ ಮಹತ್ವವನ್ನು ಅರಿತು ಅದರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಕೊಡಗಿನಲ್ಲಿ ಇತ್ತೀಚೆಗೆ ಶೂಟಿಂಗ್ ಸ್ಪರ್ಧೆಗಳು ವ್ಯಾಪಕವಾಗಿ ನಡೆಯುತ್ತಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಆದರೆ ಇದು ಕೇವಲ ಸ್ಪರ್ಧೆ ಆಯೋಜನೆಗೆ ಮಾತ್ರ ಸೀಮಿತವಾಗದೆ ಉದಯೋನ್ಮುಖ ಶೂಟರ್ಸ್ ಗಳನ್ನು ಬೆಳಕಿಗೆ ತರುವ ಕೆಲಸವಾಗಬೇಕು. ಕೊಡಗಿನ ಶೂಟರ್ಸ್ ಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಅವರನ್ನು ತಯಾರು ಮಾಡಬೇಕು. ಇದಕ್ಕಾಗಿ ಕೊಡಗಿನ ಶೂಟರ್ಸ್ ಸಂಘಟನೆಗಳು ವಿಶೇಷವಾದ ಕಾರ್ಯಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಬೇಕು. ಈ ಮೂಲಕ ಜಿಲ್ಲೆಯ ಶೂಟರ್ಸ್ ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಖ್ಯಾತಿಯನ್ನು ಹೆಚ್ಚಿಸುವಂತಾಗಬೇಕು ಎಂದು ಅರುಣ್ ಮಾಚಯ್ಯ ಅವರು ಸಲಹೆ ನೀಡಿದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ವಹಿಸಿದ್ದರು. ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಗೋಣಿಕೊಪ್ಪಲು ಎಪಿಎಂಸಿ ಮಾಜಿ ಅಧ್ಯಕ್ಷರಾದ ಕಾಳಪಂಡ ಟಿ. ಟಿಪ್ಪು ಬಿದ್ದಪ್ಪ, ಯುವ ಉದ್ಯಮಿ ಕಾಳಪಂಡ ಜೆ. ಬೋಪಣ್ಣ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪೂದ್ರಿಮಾಡ ಸರಿತ ತಮ್ಮಯ್ಯ ಪ್ರಾರ್ಥಿಸಿದರೆ, ಮಾಯಮುಡಿ ಗ್ರಾ.ಪಂ.ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ ಸ್ವಾಗತಿಸಿದರು.

ವಿಜೇತರಿಗೆ ಬಹುಮಾನ ವಿತರಣೆ: 0.22 ರೈಫಲ್ಸ್ ಮತ್ತು 12ನೇ ಬೋರ್ ಕೋವಿಯ ಪ್ರತ್ಯೇಕ ಎರಡು ವಿಭಾಗಗಳಲ್ಲಿ ಈ ತೋಕ್ ನಮ್ಮೆ ನಡೆಯಿತು. 0.22 ರೈಫಲ್ಸ್ ವಿಭಾಗದಲ್ಲಿ ಪುತ್ತರಿರ ನಂಜಪ್ಪ (ಪ್ರಥಮ), ಶಿಜು ಮಂಡ್ಯ (ದ್ವಿತೀಯ) ಮತ್ತು ಬಡುವಂಡ ಶ್ಲೋಕ್ ಸುಬ್ಬಯ್ಯ (ತೃತೀಯ) ಸ್ಥಾನ ಪಡೆದರೆ, 12ನೇ ಬೋರ್ ಕೋವಿಯ ವಿಭಾಗದಲ್ಲಿ ಮೂಕೊಂಡ ಅಕ್ಷಿತ್ (ಪ್ರಥಮ), ಅಜ್ಜೇಟಿರ ಕಿಶನ್ (ದ್ವಿತೀಯ) ಮತ್ತು ನಾಪಂಡ ಬನ್ಸಿ (ತೃತೀಯ) ಸ್ಥಾನ ಪಡೆದುಕೊಂಡರು. ಶಾಲಾ ಮೈದಾನದ ಆವರಣದಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ಸ್ಪರ್ಧಿಗಳಿಗೆ ಪಾರಿತೋಷಕ ಮತ್ತು ನಗದು ಬಹುಮಾನಗಳನ್ನು ವಿತರಿಸಲಾಯಿತು.

ತೋಕ್ ನಮ್ಮೆಯ ಸಂಚಾಲಕರಾದ ಸಣ್ಣವಂಡ ವಿನಯ್ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾಯಮುಡಿ ಗ್ರಾ. ಪಂ. ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ, ಮಾಯಮುಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆಪಟ್ಟಿರ ಬೋಪಣ್ಣ, ಸದಸ್ಯರಾದ ಮಲ್ಲೇಂಗಡ ಮಮತಾ ಪೂಣಚ್ಚ, ಮಾಯಮುಡಿಯ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುಧೀರ್, ಕಾಫಿ ಬೆಳೆಗಾರರಾದ ಸಣ್ಣುವಂಡ ಸರೋಜ, ಕೆ.ಸಿ. ನರೇಂದ್ರ, ಪುಚ್ಚಿಮಾಡ ರಾಯಿ ಮಾದಪ್ಪ, ಗೋಣಿಕೊಪ್ಪಲಿನ ಟಾಟಾ ಮೋಟರ್ಸ್‌ ವ್ಯವಸ್ಥಾಪಕ ಪುಳ್ಳಂಗಡ ಸಿಮ್ ಕುಟ್ಟಪ್ಪ, ವ್ಯವಸ್ಥಾಪಕ ಬೋಪಣ್ಣ, ಮೊದಲಾದವರು ಭಾಗವಹಿಸಿದ್ದರು. ದಿ. ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಅವರ ಸ್ಮರಣಾರ್ಥವಾಗಿ ಅವರ ಪತ್ನಿ ಸುಜಿತಾ ಚಂಗಪ್ಪ ಅವರು ತೋಕ್ ನಮ್ಮೆಯ ಮಧ್ಯಾಹ್ನದ ಊಟವನ್ನು ಪ್ರಾಯೋಜಿಸಿದ್ದರು. ದಿನವಿಡೀ ನಡೆದ ಈ ತೋಕ್ ನಮ್ಮೆಯಲ್ಲಿ ಕೊಡಗು ಸೇರಿದಂತೆ ಹೊರಜಿಲ್ಲೆಗಳಿಂದಲೂ ನೂರಾರು ಸ್ಪರ್ಧಿಗಳು ಪಾಲ್ಗೊಂಡಿದ್ದರು.

coorg buzz
coorg buzz