ಮಡಿಕೇರಿ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ದೇವಣಗೇರಿ ಗ್ರಾಮದ ಪುಡಿಯಂಡ ಹೆಚ್. ರಫಿ ಸುಬೇದಾರ್ ಮೇಜರ್ ಆಗಿ ಪದೋನ್ನತಿ ಪಡೆದಿದ್ದಾರೆ.
ಭಾರತೀಯ ಸೇನೆಯ 22ನೇ ಮರಾಠ ಲೈಟ್ ಇನ್ಫೆಂಟ್ರಿ ರೆಜಿಮೆಂಟಿನಲ್ಲಿ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪುಡಿಯಂಡ ಹೆಚ್. ರಫಿ ಅವರು ಸುಬೇದಾರ್ ಮೇಜರ್ ಆಗಿ ಪದೋನ್ನತಿ ಪಡೆದಿರುವುದು ನಮ್ಮ ಸಮುದಾಯಕ್ಕೆ ಮಾತ್ರವಲ್ಲ ಇಡೀ ಕೊಡಗು ಜಿಲ್ಲೆಗೆ ಕೀರ್ತಿ ಮೂಡಿಸಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ ಮೆಚ್ಚುಗೆ ವ್ಯಕ್ತಪಡಿಸಿದೆ.
ದೇವಣಗೇರಿ ಗ್ರಾಮದ ದಿ.ಪುಡಿಯಂಡ ಹಂಸ ಮತ್ತು ಫಾತುಮಾ ದಂಪತಿಯ ಪುತ್ರರಾಗಿರುವ ರಫಿ ಸುಬೇದಾರ್ ಮೇಜರ್ ಹುದ್ದೆಗೇರಿರುವ ಕೊಡವ ಮುಸ್ಲಿಂ ಸಮುದಾಯದ ಮೊದಲ ಸಾಧಕರಾಗಿದ್ದಾರೆ. ಮುಂದೆಯೂ ರಫಿಯವರು ಸೇನೆಯಲ್ಲಿ ಇನ್ನಷ್ಟು ಎತ್ತರದ ಹುದ್ದೆಗೇರಲಿ. ಅವರನ್ನು ಮತ್ತಷ್ಟು ವರ್ಷಗಳ ಕಾಲ ದೇಶ ಸೇವೆ ಮಾಡಲು ಭಗವಂತ ಅನುಗ್ರಹಿಸಲಿ ಎಂದು ಅಸೋಸಿಯೇಷನ್ ಪದಾಧಿಕಾರಿಗಳು ಶುಭ ಕೋರಿದ್ದಾರೆ.



