ಜಲಜೀವನ್ ಮಿಷನ್ ಯೋಜನೆ ಜೂನ್ ಅಂತ್ಯದೊಳಗೆ ಪ್ರಗತಿ ಸಾಧಿಸಿ: ಯದುವೀರ್

Jaljeevan Mission

Share this post :

coorg buzz

ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‍ಗೆ ಸಂಸದರಾದ ಯದುವೀರ್ (Yaduveer) ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಾಕೀತು ಮಾಡಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಲಜೀವನ್ ಮಿಷನ್ ಯೋಜನೆಯಡಿ ಪ್ರತೀ ಕುಟುಂಬಕ್ಕೂ ನಲ್ಲಿ ನೀರು ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಇದರ ಗಂಭೀರತೆ ಅರ್ಥ ಮಾಡಿಕೊಂಡು ಬಾಕಿ ಇರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಲೋಕಸಭಾ ಸದಸ್ಯರು ನಿರ್ದೇಶನ ನೀಡಿದರು. ಜಲಜೀವನ್ ಮಿಷನ್ ಯೋಜನೆಯು ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಯಾಗಿದ್ದು, ಪ್ರತೀ ಕುಟುಂಬಕ್ಕೂ ಶುದ್ದ ಕುಡಿಯುವ ನೀರು ಒದಗಿಸುವಲ್ಲಿ ಆದ್ಯತೆ ನೀಡಬೇಕು ಎಂದು ಅವರು ಸೂಚಿಸಿದರು.
ಜಲಜೀವನ್ ಮಿಷನ್ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಆಗಾಗ ಭೇಟಿ ನೀಡಿ ಸ್ಥಳ ಪರಿಶೀಲಿಸುವಂತಾಗಬೇಕು ಎಂದು ಸಂಸದರು ಸಲಹೆ ಮಾಡಿದರು.

ಈ ಬಗ್ಗೆ ಗಮನಸೆಳೆದ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಅವರು ಚೆಂಬೆಬೆಳ್ಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಪೂರ್ಣಗೊಳಿಸಿ, ಶುದ್ಧ ಕುಡಿಯುವ ನೀರು ಒದಗಿಸುವಂತಾಗಬೇಕು ಎಂದು ಅವರು ನಿರ್ದೇಶನ ನೀಡಿದರು. ಜೆಜೆಎಂ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಲಾಗಿದೆ. ಆದರೂ ಸಹ ಪರಿಪೂರ್ಣವಾಗಿ ಕಾಮಗಾರಿ ಆಗದಿರುವುದು ಬೇಸರ ತರಿಸಿದೆ ಎಂದರು.

ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ನಾಗೇಶ್ ಕುಂದಲ್ಪಾಡಿ ಅವರು ಜಲಜೀವನ್ ಮಿಷನ್ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂದು ಸಲಹೆ ಮಾಡಿದರು.
ಮತ್ತೊಬ್ಬ ಸದಸ್ಯರಾದ ಡಾ.ನವೀನ್ ಕುಮಾರ್ ಅವರು ಮಾತನಾಡಿ ಜೆಜೆಎಂ ಸೇರಿದಂತೆ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಲ್ಲಿ ಅಧಿಕಾರಿಗಳು ಮತ್ತು ಎಂಜಿನಿಯರ್‍ಗಳ ಸಮನ್ವಯತೆ ಅತೀಮುಖ್ಯ. ಆ ನಿಟ್ಟಿನಲ್ಲಿ ಜೆಜೆಎಂ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಲಹೆ ಮಾಡಿದರು.

ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಮಾತನಾಡಿ ಮೂರು ಹಂತದಲ್ಲಿ ಕೆಲಸ ನಡೆದಿದ್ದು, ಜೆಜೆಎಂ ಕುಡಿಯುವ ನೀರು ಪೂರೈಕೆಗೆ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯರಾದ ಕಾಂತಿ ಸತೀಶ್ ಅವರು ಜಲಜೀವನ್ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿದ್ದು, ಪ್ರತೀ ಕುಟುಂಬಕ್ಕೂ ಕುಡಿಯುವ ನೀರು ಪೂರೈಕೆ ಆಗಬೇಕು ಎಂದರು. ಜೆಜೆಎಂ ಸಂಬಂಧಿಸಿದಂತೆ ಎಲ್ಲೆಲ್ಲಿ ಸಮಸ್ಯೆ ಇದೆ ಎಂದು ಸ್ಥಳ ಪರಿಶೀಲಿಸಿ ವರದಿ ನೀಡಲಾಗುವುದು ಎಂದು ಜಿ.ಪಂ.ಸಿಇಒ ಅವರು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್ ಅವರು ಮಾಹಿತಿ ನೀಡಿ ಜೆಜೆಎಂ ಯೋಜನೆ ಮೂರು ಹಂತದಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಮೊದಲ ಹಂತದಲ್ಲಿ 188 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಸುಮಾರು 13,517 ಲಕ್ಷ ರೂ. ಅಂದಾಜು ಮೊತ್ತದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. 185 ಕಾಮಗಾರಿಗಳು ಪೂರ್ಣಗೊಂಡಿದೆ ಎಂದು ತಿಳಿಸಿದರು.

ಎರಡನೇ ಹಂತದಲ್ಲಿ 129 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 85 ಕಾಮಗಾರಿಗಳು ಪೂರ್ಣಗೊಂಡಿದೆ. ಸುಮಾರು 9092 ಲಕ್ಷ ರೂ. ಅಂದಾಜು ಮಾಡಲಾಗಿದೆ ಎಂದರು. ಮೂರನೇ ಹಂತದಲ್ಲಿ 457 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 348 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 107 ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ವಿವರಿಸಿದರು. ಒಟ್ಟಾರೆ ಸುಮಾರು 35,869 ಲಕ್ಷ ರೂ ಅಂದಾಜಿನಲ್ಲಿ ಒಟ್ಟು 23,218 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ಅವರು ವಿವರಿಸಿದರು.

ಮಡಿಕೇರಿ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಸಂಬಂಧಿಸಿದಂತೆ ಈಗಾಗಲೇ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಇದುವರೆಗೆ ಯಾವುದೇ ಕೆಲಸಗಳು ಆಗದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆದಷ್ಟು ತ್ವರಿತವಾಗಿ ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯರಾದ ನಾಗೇಶ್ ಕುಂದಲ್ಪಾಡಿ ಅವರು ದಿಶಾ ಸಮಿತಿ ಸಭೆಯು ನಡೆದು ಹಲವು ತಿಂಗಳಾಗಿದ್ದು, ಇದುವರೆಗೆ ಏಕೆ ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ಅನುಮತಿ ಪಡೆಯದೆ, ಕಾಮಗಾರಿಗೆ ಚಾಲನೆ ನೀಡಿದಿರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇಲಾಖೆ ಅಧಿಕಾರಿಗಳಿಗೆ ಇಚ್ಛಾಶಕ್ತಿ ಮತ್ತು ಬದ್ಧತೆ ಇದ್ದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತವೆ. ಆದರೆ ಗುಡ್ಡವಾಗಿ ಬೆಳೆಯುತ್ತಿರುವ ಕಸ ಕರಗಿಸಲು ಅನುಮತಿ ಪಡೆಯಲು ಹಿಂದೇಟು ಹಾಕಿದರೆ ಹೇಗೆ ಎಂದು ತೀವ್ರ ಅಸಮಾದಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಮತ್ತೊಬ್ಬ ಸದಸ್ಯರಾದ ಡಾ.ನವೀನ್ ಕುಮಾರ್ ಅವರು ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಅರಣ್ಯ ಹಾಗೂ ಪರಿಸರ ಇಲಾಖೆಯ ಅನುಮತಿ ಪಡೆಯುವ ಬಗ್ಗೆ ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಗಮನಸೆಳೆಯಲಾಗುವುದು ಎಂದು ಸಂಸದರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪಾರಂಪರಿಕ ಕಸ ಕರಗಿಸುವ ಸಂಬಂಧ 5 ಬಾರಿ ಟೆಂಡರ್ ಆಗಿದ್ದು, ಯಾರೂ ಸಹ ಮುಂದೆ ಬಂದಿರಲಿಲ್ಲ. ಆ ನಿಟ್ಟಿನಲ್ಲಿ ವಿರಾಜಪೇಟೆ ಮತ್ತು ಕುಶಾಲನಗರ ಸೇರಿಸಿಕೊಂಡು ಕಸ ವಿಲೇವಾರಿಗೆ ಪ್ರಯತ್ನಿಸಲಾಗಿದೆ ಎಂದರು. ಭಾರತ ಸಂಚಾರ ನಿಗಮ ನಿಯಮಿತದಲ್ಲಿ ಬೇಡಿಕೆ ಇರುವ ಕಡೆ ಟವರ್‍ಗಳ ನಿರ್ಮಾಣ, ನಿರಂತರ ಅಂತರ್ಜಾಲ ಸಂಪರ್ಕ ಕಲ್ಪಿಸುವುದು ಸೇರಿದಂತೆ ಅಗತ್ಯ ಕ್ರಮವಹಿಸುವಂತೆ ಬಿಎಸ್‍ಎನ್‍ಎಲ್ ಎಂಜಿನಿಯರ್‍ಗಳಿಗೆ ಸೂಚಿಸಿದರು.

ಟವರ್ ನಿರ್ಮಾಣಕ್ಕೆ ಜಾಗ ಗುರುತಿಸುವುದು ಜೊತೆಗೆ ಅನುಮತಿ ಪಡೆಯುವುದು ಹೀಗೆ ಹಲವು ಕೆಲಸಗಳನ್ನು ಬಿಎಸ್‍ಎನ್‍ಎಲ್ ಅಧಿಕಾರಿಗಳು ನಿರ್ವಹಿಸಬೇಕು. ಕಚೇರಿಯಲ್ಲಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯರಾದ ರಾಕೇಶ್ ಅವರು ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ, ಟಿ.ಶೆಟ್ಟಿಗೇರಿ, ಬಿ.ಶೆಟ್ಟಿಗೇರಿ, ಹುದಿಕೇರಿ, ಬೇಳೂರು, ಕೂತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದೂ ಸಹ ಮೊಬೈಲ್ ನೆಟ್‍ವರ್ಕ್ ಇಲ್ಲದೆ ಪರಿತಪಿಸುವಂತಾಗಿದೆ. ಈ ಬಗ್ಗೆ ಗಮನಹರಿಸಬೇಕು ಎಂದು ಕೋರಿದರು

ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಬಿಎಸ್‍ಎನ್‍ಎಲ್ ಮೂಲಕ ಅಂತರ್ಜಾಲ ಸಂಪರ್ಕವನ್ನು ನಿರಂತರವಾಗಿ ಪೂರೈಕೆ ಮಾಡಬೇಕು. ಇದೊಂದು ಸರ್ಕಾರದ ಸಂಸ್ಥೆಯಾಗಿದ್ದು, ಕುಗ್ರಾಮಗಳಿಗೂ ಸಹ ಬಿಎಸ್‍ಎನ್‍ಎಲ್ ಸೌಲಭ್ಯಗಳು ತಲುಪುವಂತಾಗಬೇಕು ಎಂದರು.

ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಸಂಸದರು ಸಮರ್ಪಕ ರಸ್ತೆ ನಿರ್ವಹಣೆ ಮಾಡಬೇಕು. ರಸ್ತೆ ಬದಿ ಕಾಡು ಕಡಿಬೇಕು ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‍ಗೆ ಸೂಚಿಸಿದರು. ಹಾಗೆಯೇ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತಾಗಬೇಕು. ಈಗಾಗಲೇ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಸದರು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರಿಕೆ ಭಾಗಮಂಡಲ ರಸ್ತೆ ಸುಧಾರಿಸಬೇಕು ಎಂದು ನಾಗೇಶ್ ಕುಂದಲ್ಪಾಡಿ ಅವರು ಗಮನಸೆಳೆದರು.ಮುಂಗಾರು ಸಂದರ್ಭದಲ್ಲಿ ಬಿತ್ತನೆ ಬೀಜ ಹಾಗೂ ರಸ ಗೊಬ್ಬರಕ್ಕೆ ತೊಂದರೆ ಉಂಟಾಗದಂತೆ ದಾಸ್ತಾನು ಮಾಡಿಕೊಳ್ಳಬೇಕು. ಭತ್ತ ಹಾಗೂ ಮುಸುಕಿನ ಜೋಳ ಬಿತ್ತನೆ ಬೀಜ ಕೊರತೆಯಾಗದಂತೆ ಗಮನಹರಿಸಬೇಕು ಎಂದು ಸಂಸದರು ನಿರ್ದೇಶನ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಯೂರಿಯಾ, ಡಿಐಪಿ, ಎಂಒಪಿ, ಕಾಂಪ್ಲೆಕ್ಸ್, ಎಸ್‍ಎಸ್‍ಪಿ ಸೇರಿದಂತೆ ರಸಗೊಬ್ಬರ ಬೇಡಿಕೆಗೆ ತಕ್ಕಂತೆ ಅಗತ್ಯ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದರು. ಹಾಗೆಯೇ ಭತ್ತ ಹಾಗೂ ಮುಸುಕಿನ ಜೋಳ ಬಿತ್ತನೆ ಬೀಜ ಸಂಬಂಧಿಸಿದಂತೆ 1700 ಕ್ವಿಂಟಾಲ್ ಬಿತ್ತನೆ ಬೀಜವನ್ನು ಪೂರೈಸಲು ಕ್ರಮವಹಿಸಲಾಗಿದೆ ಎಂದರು.

2025 ರ ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 1708.26 ಕ್ವಿಂಟಾಲ್ ಭತ್ತ ಮತ್ತು ಮುಸುಕಿನ ಜೋಳದ ಬೆಳೆಗಳ ಬೀಜ ವಿತರಣೆಗೆ ಗುರಿ ನಿಗಧಿಪಡಿಸಲಾಗಿದೆ. ಭತ್ತ ಮತ್ತು ಮುಸುಕಿನ ಜೋಳದ ಬೆಳೆಗಳು ಜಿಲ್ಲೆಯ ಪ್ರಮುಖ ಕೃಷಿ ಬೆಳೆಗಳಾಗಿದ್ದು, ಭತ್ತದ ಬಿತ್ತನೆ ಮತ್ತು ನಾಟಿ ಕಾರ್ಯಗಳನ್ನು ಜೂನ್ ಅಂತ್ಯದಿಂದ ಪ್ರಾರಂಭಗೊಂಡು, ಜುಲೈ ಮತ್ತು ಆಗಸ್ಟ್ ಮಾಹೆಗಳಲ್ಲಿ ಹಾಗೂ ಮುಸುಕಿನ ಜೋಳದ ಬಿತ್ತನೆ ಕಾರ್ಯವನ್ನು ಜೂನ್ ಮಾಹೆಯಲ್ಲಿ ಕೈಗೊಳ್ಳಲಾಗುತ್ತದೆ ಎಂದರು.

ಪ್ರಸ್ತುತ ಜಿಲ್ಲೆಯ 16 ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅವಶ್ಯವಿರುವ ವಿವಿಧ ತಳಿಗಳ ಬಿತ್ತನೆ ಬೀಜಗಳನ್ನು ಕೆಎಸ್‍ಎಸ್‍ಸಿ ಮತ್ತು ಎನ್‍ಎಸ್‍ಸಿ ಸಂಸ್ಥೆಗಳಿಂದ ಪಡೆದು, ದಾಸ್ತಾನು ಮಾಡಿ, ವಿತರಣೆಗೆ ಕ್ರಮವಹಿಸಲಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿದಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಕೃಷಿ ಇಲಾಖೆ ಮೂಲಕ ಕಲ್ಪಿಸಲಾಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತಾಗಬೇಕು. ರಸಗೊಬ್ಬರ ಪೂರೈಕೆ ಹಾಗೂ ಬಿತ್ತನೆ ಬೀಜ ವಿತರಣೆಯಲ್ಲಿ ಯಾವುದೇ ರೀತಿ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು ಎಂದರು.

ಕೂಡಿಗೆಯ ಕೃಷಿ ತರಬೇತಿ ಸಂಸ್ಥೆಯಲ್ಲಿ 700 ಕ್ವಿಂಟಾಲ್ ಭತ್ತ ಬಿತ್ತನೆ ಬೀಜ ಬೆಳೆಯಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು. ಡಾ.ನವೀನ್ ಕುಮಾರ್ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಭತ್ತ ಬೆಳೆಯಲು ಕೃಷಿಕರಿಗೆ ಪ್ರೋತ್ಸಾಹಿಸುವಂತಾಗಬೇಕು. ಆ ನಿಟ್ಟಿನಲ್ಲಿ ಕೃಷಿ ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.

ತೋಟಗಾರಿಕೆ ಇಲಾಖೆ ಸಂಬಂಧಿಸಿದಂತೆ ಮಾಹಿತಿ ಪಡೆದ ಸಂಸದರು ಬೆಳೆಗಳ ಅಭಿವೃದ್ಧಿ ಹಾಗೂ ವಿಸ್ತರಣೆ, ಮಾರುಕಟ್ಟೆ ಹಾಗೂ ಸಂಗ್ರಹಣೆ ಮತ್ತಿತರ ಬಗ್ಗೆ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಮಾತನಾಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಯೋಗೇಶ್ ಅವರು ಜಿಲ್ಲೆಯಲ್ಲಿ 1.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ, 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಳು ಮೆಣಸು, 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ, ಒಂದು ಜಿಲ್ಲೆ, ಒಂದು ಉತ್ಪನ್ನ ಕಾರ್ಯಕ್ರಮ ಮುಂದುವರಿದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ ನಾಯಕ್ ಅವರು ಪಿಎಂಎಫ್‍ಎಂಇ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಕಿರುಆಹಾರ ಸಂಸ್ಕರಣ ಘಟಕಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು. ಸಮಿತಿ ಸದಸ್ಯರಾದ ಆರ್.ಕೆ.ಚಂದ್ರು ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಅನಾದಿಕಾಲದಿಂದಲೂ ಆದಿವಾಸಿಗಳು ಬದುಕು ನಡೆಸುತ್ತಿದ್ದು, ಸಾಕಷ್ಟು ಕುಟುಂಬಗಳಿಗೆ ಅರಣ್ಯ ಹಕ್ಕುಪತ್ರ ವಿತರಿಸಲಾಗಿದೆ. ಹಕ್ಕು ಪತ್ರ ವಿತರಿಸಿರುವವರಿಗೆ ಆರ್‍ಟಿಸಿ ವಿತರಿಸುವಂತಾಗಬೇಕು, ಜೊತೆಗೆ ಹಕ್ಕುಪತ್ರ ವಿತರಿಸಲು ಇನ್ನೂ ಸಾಕಷ್ಟು ಕುಟುಂಬಗಳಿಗೆ ಬಾಕಿ ಇದೆ ಎಂದು ಅವರು ಗಮನ ಸೆಳೆದರು.