ವೀರಾಜಪೇಟೆ : ವಿವಾಹ ಸಮಾರಂಭದಲ್ಲಿ ಜೂಜಾಟದಲ್ಲಿ ತೊಡಗಿದ್ದ ಸಂದರ್ಭ ಪೊಲೀಸರು ದಾಳಿ ನಡೆಸಿ ಜೂಜಿಗೆ ಬಳಸಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಮೊಗರಗಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯವಿತ್ತು. ಮಂಟಪದಲ್ಲಿನ ಕೊಠಡಿಯೊಂದರಲ್ಲಿ ಮದುವೆಗೆ ಬಂದಿದ್ದ ಕೆಲವರು ಹಣ ಪಣಕ್ಕಿಟ್ಟು ಜೂಜಾಟದಲ್ಲಿ ತೊಡಗಿದ್ದರು. ಮಾಹಿತಿ ಅರಿತ ಪೊಲೀಸರು ಕಲ್ಯಾಣ ಮಂಟಪದ ಕೊಠಡಿಯ ಮೇಲೆ ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳಿಂದ ಒಟ್ಟು 4,25,545/ ರೂ. ವಶಕ್ಕೆ ಪಡೆದಿದ್ದಾರೆ.
ಜೂಜಾಟದಲ್ಲಿ ತೊಡಗಿದ್ದ 8 ಮಂದಿಯ ಮೇಲೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾನೂನು ಕ್ರಮ ಜರುಗಿಸಿದ್ದಾರೆ.
ವಿರಾಜಪೇಟೆ ಉಪ ವಿಭಾಗದ ಪ್ರಭಾರ ಪೊಲೀಸ್ ಉಪ ಅಧಿಕ್ಷಕ ಪಿ.ಚಂದ್ರಶೇಖರ್ ನಿರ್ದೇಶನದ ಮೇರೆಗೆ ವಿರಾಜಪೇಟೆ ವೃತ್ತ ನೀರಿಕ್ಷಕ ಪಿ.ಅನೂಪ್ ಮಾದಪ್ಪ ಮಾರ್ಗದರ್ಶನದಲ್ಲಿ ವಿರಾಜಪೇಟೆ ನಗರ ಠಾಣೆಯ ಪಿ.ಎಸ್.ಐ. ಹೆಚ್.ಎಸ್. ಪ್ರಮೋದ್, ಮತ್ತು ಅಪರಾಧ ವಿಭಾಗದ ಪಿ.ಎಸ್.ಐ. ಟಿ.ಎಂ. ಕಾವೇರಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.



