ಮೂರ್ನಾಡು : ಕಾಂತೂರು-ಮೂರ್ನಾಡು ಹಾಗೂ ಹೊದ್ದೂರು ಪಂಚಾಯಿತಿ, ಕಂದಾಯ ಇಲಾಖೆ ನೇತೃತ್ವದಲ್ಲಿ ಮೈಸೂರಿನ ಬೃಂದಾವನ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಮೂರ್ನಾಡುವಿನ ಪಿ.ಎಂ.ಶ್ರೀ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಶಿಬಿರದಲ್ಲಿ 200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಸಾರ್ವಜನಿಕರಿಗೆ ರಕ್ತದೊತ್ತಡ, ಮಧುಮೇಹ, ನೇತ್ರ, ಮೂಳೆ&ಕೀಲು, ನರರೋಗ, ಕಿವಿ-ಮೂಗು, ಗಂಟಲು, ಸ್ತ್ರೀರೋಗ ಮುಂತಾದ ತಪಾಸಣೆಯನ್ನು ಉಚಿತವಾಗಿ ನಡೆಸಲಾಯಿತು. ಶಾಲೆ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನೂ ಈ ಸಂದರ್ಭ ಮಾಡಲಾಯಿತು.
ಬೃಂದಾವನ ಆಸ್ಪತ್ರೆಯ ನಿರ್ದೇಶಕ ಡಾ. ಆರ್. ಮಾತಂಡ ಅಯ್ಯಪ್ಪ ಶಿಬಿರಕ್ಕೆ ಚಾಲನೆ ನೀಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಾರ್ವಜನಿಕರು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಶಿಬಿರದ ಕುರಿತಾಗಿ ಮಾಹಿತಿ ನೀಡಿದ ಗ್ರಾಮ ಆಡಳಿತಾಧಿಕಾರಿ ಅಕ್ಷತಾ ಶೆಟ್ಟಿ, ಈ ಹಿಂದೆ ತನ್ನ ತಂದೆ ಅನಾರೋಗ್ಯಕ್ಕೀಡಾಗಿದ್ದಾಗ ಸವಲತ್ತುಗಳ ಮಾಹಿತಿಯಿಲ್ಲದೆ ವಿವಿಧ ರೀತಿಯ ಸಮಸ್ಯೆ ಎದುರಿಸಬೇಕಾಯಿತು. ಆ ಸಂದರ್ಭದಲ್ಲಿ ಬೃಂದಾವನ ಆಸ್ಪತ್ರೆಯವರು ಸರ್ಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದ್ದರು. ಅಂದು ನಾನು ಅನುಭವಿಸಿದ್ದ ಸಮಸ್ಯೆ ಬೇರೆಯವರಿಗೆ ಆಗುವುದು ಬೇಡ ಎಂಬುದು ನನ್ನ ಮನಸ್ಸಲ್ಲಿತ್ತು. ಹಾಗಾಗಿ ಅವರ ಸಹಕಾರದಲ್ಲಿ ಉಚಿತ ಶಿಬಿರ ಹಾಗೂ ಯೋಜನೆಗಳ ಕುರಿತಾಗಿ ಜನರಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಯೋಚಿಸಿದ್ದೆ. ಇಂದು ಅದು ನೆರವೇರಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.
ವೈದ್ಯರಾದ ಡಾ.ಮನೋರಂಜಿನಿ, ಡಾ.ಶ್ರೇಯಸ್, ಡಾ.ಅಂಕಿತ, ಸಿಬ್ಬಂದಿ ವರ್ಗದವರಾದ ಪಿಆರ್‌ಒ ಗುರುರಾಜ್, ಮುರುಳಿ, ಡಾ.ಅಗರ್ವಾಲ್, ಮೂರ್ನಾಡು ಪಂಚಾಯಿತಿ ಅಧ್ಯಕ್ಷ ಕುಶನ್, ಉಪಾಧ್ಯಕ್ಷೆ ರೇಖಾ, ಪಿಡಿಒ ಚಂದ್ರಮೌಳಿ, ಹೊದ್ದೂರು ಪಂಚಾಯಿತಿ ಅಧ್ಯಕ್ಷ ಹಂಸ, ಪಿಡಿಒ ವತ್ಸಲ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಲತಾ ಶೆಟ್ಟಿ, ಗ್ರಾಮ ಆಡಳಿತಾಧಿಕಾರಿ ಸಂತೋಷ್ ಪಾಟೀಲ್ ಉಪಸ್ಥಿತರಿದ್ದರು.




