ವೀರಾಜಪೇಟೆ : ಮನುಷ್ಯ ತನ್ನ ಸಂಸ್ಕೃತಿಯನ್ನು ಎಂದಿಗೂ ಬಿಡಬಾರದು. ಸಂಸ್ಕೃತಿಯನ್ನು ಮರೆಯುವುದು ದೇಶದ ವಿನಾಶಕ್ಕೆ ನಾಂದಿ ಹಾಡಿದಂತೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮಡಿಕೇರಿ ಡಿ.ಎಲ್.ಎಸ್.ಎ ಸದಸ್ಯ ಕಾರ್ಯದರ್ಶಿ ಶುಭಾ ಅಭಿಪ್ರಾಯಪಟ್ಟರು.
ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ, ವಿರಾಜಪೇಟೆ ಹಾಗೂ ಕಾವೇರಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಾದಕ ವಸ್ತುಗಳ ಬಳಕೆ ಹಾಗೂ ಮೊಬೈಲ್ ಬಳಕೆ. ಇದರಿಂದಾಗಿ ಸಮಾಜವಿಂದು ಕೆಟ್ಟದುರ ಕಡೆಗೆ ಸಾಗುತ್ತಿದೆ ಏಂದು ವಿಷಾಧಿಸಿದರು.
ಯುವಜನರಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಹೆಚ್ಚಿನವರಿಗೆ ಕಾನೂನಿನ ಸರಿಯಾದ ಅರಿವಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನಿನ ಸೇವೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರವನ್ನು ಆರಂಭಿಸಲಾಗಿದೆ. ಸಾಮಾನ್ಯ ವ್ಯಕ್ತಿಗೂ ಕಾನೂನಿನ ಸೇವೆ ಒದಗಿಸಿ ಅಸಮಾನತೆಯನ್ನು ಹೋಗಲಾಡಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎ. ಹಾಜ್ಹೀರ, ಪ್ರಸ್ತುತ ಸಮಾಜದಲ್ಲಿ ಹೆಚ್ಚಿನವರು ಕಾನೂನಿನ ತತ್ವಗಳನ್ನು ಗಾಳಿಗೆ ತೂರಿ ಜೀವನ ನಡೆಸುತ್ತಿದ್ದಾರೆ. ವಿದ್ಯಾರ್ಥಿ ಜೀವನದಿಂದಲೇ ಕಾನೂನಿನ ಅರಿವಿನಂತಹ ಕಾರ್ಯಕ್ರಮಗಳು ನಡೆದಾಗ ಮುಂದೆ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ . ಜಿಲ್ಲಾ ಕಾನೂನು ಸಲಹೆಗಳ ಪ್ರಾಧಿಕಾರ ಮಹಿಳೆಯರಿಗೆ, ಮಕ್ಕಳಿಗೆ, ಪರಿಶಿಷ್ಟ ಜಾತಿ, ಪಂಗಡ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗ, ಹಿರಿಯ ನಾಗರಿಕರಿಗೆ, ಖೈದಿಗಳಿಗೆ, ಮಾಜಿ ಸೈನಿಕರಿಗೆ ಉಚಿತವಾಗಿ ಕಾನೂನು ಸೇವೆಗಳನ್ನು ನೀಡುವುದರೊಂದಿಗೆ ದುರ್ಬಲ ವರ್ಗದವರಿಗೆ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸಿಕೊಡುವ ಕೆಲಸವನ್ನು ಮಾಡುತ್ತಿದೆ ಎಂದರು.
ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ವಿರಾಜಪೇಟೆ ಕಾರ್ಯದರ್ಶಿ ವೇದಿಕಾ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ, ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಕಾಲೇಜಿನ ಟ್ರಸ್ಟಿ ಪ್ರಶಾಂತ್, ಪ್ರಾಂಶುಪಾಲೆ ಪಿ.ಕೆ. ವಿನೀತಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಕಾಲೇಜಿನ ಕಾನೂನು ಪದವಿ ವಿದ್ಯಾರ್ಥಿಗಳು , ಉಪನ್ಯಾಸಕರು , ಕಾವೇರಿ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಹಾಜರಿದ್ದರು.



