ಕನ್ನಡ ಭಾಷೆಯ ಶ್ರೇಷ್ಠತೆ, ಪ್ರತಿಷ್ಠೆಯನ್ನು ಪ್ರತಿಯೊಬ್ಬ ಕನ್ನಡಿಗ ಅರಿತು ಬಾಳಬೇಕು – ಡಾ. ಹೇಮಂತ್‌ ಕುಮಾರ್

Share this post :

ವೀರಾಜಪೇಟೆ : ಪರಭಾಷೆಗಳ ವ್ಯಾಮೋಹದಿಂದ ಕನ್ನಡ ಭಾಷೆ ಶೋಚನೀಯ ಸ್ಥಿತಿಯನ್ನು ತಲುಪುತ್ತಿದೆ. ಕನ್ನಡಿಗರಿಗೆ ಭಾಷೆಯ ಶ್ರೇಷ್ಠತೆ, ಅನನ್ಯತೆ ಅರಿವಿಲ್ಲದಿರುವುದರಿಂದ ಈ ಪರಿಸ್ಥಿತಿ ಎದುರಾಗಿದೆ ಎಂದು ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.

ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ನಾಡು ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿತ್ತು. ಅದನ್ನು ಏಕೀಕರಣಗೊಳಿಸಿದ ನೆನಪಿಗಾಗಿ ಹಾಗೂ ಮೈಸೂರು ರಾಜ್ಯವೆಂದಿದ್ದ ಹೆಸರನ್ನು ಕರ್ನಾಟಕವೆಂದು ಮರು ನಾಮಕರಣ ಮಾಡಿದ ಸುದಿನವನ್ನು ಕರ್ನಾಟಕ ರಾಜ್ಯೋತ್ಸವವೆಂದು ಆಚರಿಸುತ್ತೇವೆ . ಕನ್ನಡ ಭಾಷೆ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಭಾಷೆ. ಈ ನಾಡಿನ ರಾಜರ ಪರಾಕ್ರಮ ಉತ್ತರ ಭಾರತದವರೆಗೂ ಹರಡಿತ್ತು. ಇಮ್ಮಡಿ ಪುಲಕೇಶಿ, ಮುಮ್ಮಡಿ ಗೋವಿಂದರಂತಹ ರಾಜರ ಇತಿಹಾಸಗಳು ಇದಕ್ಕೆ ಸಾಕ್ಷಿಯಾಗಿ ನಿಂತಿವೆ ಎಂದರು.
ಎಲ್ಲಾ ಕ್ಷೇತ್ರಗಳಲ್ಲೂ ಶ್ರೇಷ್ಠತೆಯನ್ನು ಹೊಂದಿರುವ ಕನ್ನಡ ಭಾಷೆಯ ಅನನ್ಯತೆ , ಹಿರಿಮೆ , ಸುಲಲಿತತೆ ತಿಳಿಯದೆ ಇರುವುದರಿಂದ ಹೆಚ್ಚಿನವರು ಭಾಷೆಯನ್ನು ಕೀಳಾಗಿ ಕಾಣುತ್ತಿದ್ದಾರೆ. ಆದರೆ ಭಾಷೆಯು ಎಲ್ಲಾ ರೀತಿಯಲ್ಲೂ ಮಹತ್ವಪೂರ್ಣವಾಗಿದ್ದು ವೈಜ್ಞಾನಿಕವಾಗಿ ರಚನೆಯಾದ ವರ್ಣಮಾಲೆ, 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು, ಲಿಪಿಗಳಲ್ಲೇ ಅತ್ಯಂತ ಸುಂದರ ಲಿಪಿಯಾದ ಕಾರಣ ವಿಶ್ವ ಲಿಪಿಗಳ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದನ್ನು ಗಮನಿಸಬಹುದು. ಅಷ್ಟೇ ಅಲ್ಲದೆ ಬರೆದಂತೆ ಓದುವ , ಓದಿದಂತೆ ಉಚ್ಚರಿಸುವ, ಉಚ್ಚರಿಸಿದಂತೆ ಬರೆಯುವ ಕೆಲವೇ ಕೆಲವು ಭಾಷೆಗಳಲ್ಲಿ ಕನ್ನಡ ಒಂದು. ಆದ್ದರಿಂದ ವ್ಯವಹಾರಿಕವಾಗಿ ವಿವಿಧ ಭಾಷೆಗಳು ಅವಶ್ಯಕತೆ ಇದ್ದರೂ ಕನ್ನಡ ಭಾಷೆಯನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ, ಪ್ರಸ್ತುತ ಸಮಾಜದಲ್ಲಿ ವ್ಯವಹಾರಿಕ ದೃಷ್ಟಿಯಿಂದ ವಿವಿಧ ಭಾಷೆಗಳನ್ನು ಕಲಿಯುವುದು ಹಾಗೂ ಬಳಸುವುದು ಅವಶ್ಯ. ಈ ನಿಟ್ಟಿನಲ್ಲಿ ನಮ್ಮ ನಾಡಿನ ಮಾತೃ ಭಾಷೆ ಕನ್ನಡವನ್ನು ಎಂದಿಗೂ ನಿರ್ಲಕ್ಷಿಸಬಾರದು. ಭಾಷೆಯ ಹಿರಿಮೆ, ಇತಿಹಾಸ, ರಚನೆಯಾದಂತ ಶ್ರೇಷ್ಠ ಗ್ರಂಥಗಳು, ಸಾಹಿತ್ಯ, ಸಂಗೀತ ಇವೆಲ್ಲವನ್ನು ನಾವು ಅರಿತು‌ ಮುಂದಿನ ಪೀಳಿಗೆಗೆ ಅರ್ಥೈಸಿ ಕೊಡಬೇಕು. ಬಹಳ ಸ್ವಂತಿಕೆಯಿಂದ ಕೂಡಿದ ಭಾಷೆಯನ್ನು ಬಳಸಿ ಬೆಳೆಸುವ ಪಣವನ್ನು ನಾವೆಲ್ಲರೂ ತೊಡಬೇಕು ಎಂದರು.
ಐಕ್ಯೂಎಸಿ ಸಂಯೋಜಕಿ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿಯ ಮುಖ್ಯಸ್ಥೆ ಪ್ರಿಯ ಮುದ್ದಪ್ಪ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗರಾಜು, ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ. ಸುನಿಲ್ ಕುಮಾರ್ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು , ಆಡಳಿತಾತ್ಮಕ ಸಿಬ್ಬಂದಿ , ವಿದ್ಯಾರ್ಥಿಗಳು ಹಾಜರಿದ್ದರು.

coorg buzz
coorg buzz