ಕೊಡಗಿನಲ್ಲಿ ಒಂದು ವರ್ಷದಲ್ಲಿ ಬೀದಿ ಶ್ವಾನ ದಾಳಿಗೆ ಒಳಗಾದವರ ಸಂಖ್ಯೆ ಎಷ್ಟು ಗೊತ್ತಾ..!?

Share this post :

ಮಡಿಕೇರಿ : ದಿನದಿಂದ ದಿನಕ್ಕೆ ಬೀದಿ ಶ್ವಾನಗಳ ಹಾವಳಿ ಹೆಚ್ಚಾಗುತ್ತಿದ್ದು, ಶ್ವಾನ ಕಡಿತಕ್ಕೆ ಒಳಗಾಗುವವರ ಸಂಖ್ಯೆ ಅಧಿಕವಾಗಿದೆ. ಆದ್ದರಿಂದ ಸುಪ್ರಿಂಕೋರ್ಟ್ ನಿರ್ದೇಶನದಂತೆ ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಅಗತ್ಯ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಬೀದಿ ಶ್ವಾನ ಹಾವಳಿ ನಿಯಂತ್ರಣ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅವರು ಮಾತನಾಡಿದರು. ಬೀದಿ ಶ್ವಾನಗಳನ್ನು ಸ್ಥಳಾಂತರಿಸಲು ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ (ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ) ಕನಿಷ್ಠ ೧ ಎಕರೆ ಜಾಗ ಕಾಯ್ದಿರಿಸಿ ಸುತ್ತುಗೋಡೆ ನಿರ್ಮಿಸುವಂತೆ ನಿರ್ದೇಶನ ನೀಡಿದರು.
ನಗರಾಭಿವೃದ್ದಿ, ಪಂಚಾಯತ್ ರಾಜ್, ಪಶುಪಾಲನೆ ಹಾಗೂ ಪಶು ವೈದ್ಯಕೀಯ, ಶಿಕ್ಷಣ, ಸಾರಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಯುವ ಸಬಲೀಕರಣ ಸೇರಿದಂತೆ ವಿವಿಧ ಇಲಾಖೆಗಳು ಬೀದಿ ಶ್ವಾನಗಳ ಹಾವಳಿ ನಿಯಂತ್ರಣ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.
ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣ ಸೇರಿದಂತೆ ಎಲ್ಲೆಡೆ ಬೀದಿನಾಯಿಗಳ ಹಾವಳಿ ನಿಯಂತ್ರಿಸಬೇಕಿದೆ ಎಂದರು.
ಬೀದಿ ಶ್ವಾನಗಳನ್ನು ಸ್ಥಳಾಂತರಿಸಲು ಕ್ರಮವಹಿಸುವುದು, ಸೂಕ್ತ ರಕ್ಷಣೆ ಮಾಡುವಲ್ಲಿ ಮುನ್ನೆಚ್ಚರ ವಹಿಸುವುದು, ನೋಡಲ್ ಅಧಿಕಾರಿಗಳನ್ನು ನಿಯೋಜಿಸುವುದು, ಹಾವಳಿ ನಿಯಂತ್ರಣ ಮಾಡುವಲ್ಲಿ ಆಗಾಗ ಪರಿಶೀಲಿಸುವುದು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ‘ರೇಬಿಸ್ ನಿರೋಧಕ ಲಸಿಕೆ ಮತ್ತು ರೇಬೀಸ್ ಇಮ್ಯುನೊಗ್ಲೋಬ್ಯುಲಿನ್’ ಚುಚ್ಚುಮದ್ದಿನ ದಾಸ್ತಾನು ಮಾಡಿಕೊಳ್ಳುವುದು, ಶ್ವಾನ ಕಡಿತಕ್ಕೆ ಒಳಗಾದವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವುದು ಸೇರಿದಂತೆ ಹಲವು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಪೌರಾಯುಕ್ತ ಎಚ್.ಆರ್. ರಮೇಶ್ ಬೀದಿ ಶ್ವಾನ ಸ್ಥಳಾಂತರಕ್ಕೆ ನಗರದ ಹೊರವಲಯದ ಸ್ವೀವರ್ಟ್ ಹಿಲ್ ಬಳಿ ನಗರಸಭೆಯ ಒಂದೂವರೆ ಎಕರೆ ಜಾಗ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸೋಮವಾರಪೇಟೆ, ಕುಶಾಲನಗರ, ಪೊನ್ನಂಪೇಟೆ, ಗೋಣಿಕೊಪ್ಪ ವ್ಯಾಪ್ತಿಗಳಲ್ಲಿ ಜಾಗ ಕಾಯ್ದಿರಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ೨೦೨೪ ರ ಕ್ಯಾಲೆಂಡರ್ ವರ್ಷದಲ್ಲಿ ಜಿಲ್ಲೆಯಲ್ಲಿ ೪,೮೭೨ ಮಂದಿ ಶ್ವಾನ ಕಡಿತಕ್ಕೆ ಒಳಗಾಗಿದ್ದಾರೆ. ಹಾಗೆಯೇ ೨೦೨೫ ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗೆ ೪,೨೧೭ ಮಂದಿ ಶ್ವಾನ ಕಡಿತಕ್ಕೆ ಒಳಗಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ಲಿಂಗರಾಜು ದೊಡ್ಡಮನಿ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಭೂ ದಾಖಲೆಗಳ ಉಪ ನಿರ್ದೇಶಕ ನಿರಂಜನ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಿದಾನಂದ ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸೌಮ್ಯ ಪೊನ್ನಪ್ಪ, ಪುರಸಭೆ ಮುಖ್ಯಾಧಿಕಾರಿಗಳಾದ ಕೃಷ್ಣಪ್ರಸಾದ್, ಗಿರೀಶ್, ನಾಚಪ್ಪ, ಗೋಪಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್, ಇತರರು ಇದ್ದರು.

 

coorg buzz
coorg buzz