ಜಿಲ್ಲಾ ಮಟ್ಟದ ‘ಗ್ಯಾರಂಟಿ ಕಾರ್ಯಗಾರ ಮತ್ತು ಗ್ಯಾರಂಟಿ ಉತ್ಸವ’ ಕಾರ್ಯಕ್ರಮ

Share this post :

ಮಡಿಕೇರಿ:- ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ಭರವಸೆ ನೀಡಿದಂತೆ ‘ಪಂಚ ಗ್ಯಾರಂಟಿ’ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಎಲ್ಲಾ ಜನರಿಗೆ ಒಂದಲ್ಲ ಒಂದು ಸೌಲಭ್ಯಗಳು ತಲುಪುವಂತೆ ಮಾಡುವಲ್ಲಿ ಸರ್ಕಾರ ಶ್ರಮಿಸುತ್ತಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ತಿಳಿಸಿದ್ದಾರೆ.  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ‘ಗ್ಯಾರಂಟಿ ಕಾರ್ಯಗಾರ ಮತ್ತು ಗ್ಯಾರಂಟಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ 4 ಲಕ್ಷ ಕೋಟಿ ಬಜೆಟ್‍ನಲ್ಲಿ 55 ಸಾವಿರ ಕೋಟಿ ರೂ.ವನ್ನು ವಾರ್ಷಿಕವಾಗಿ ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆ ಎಂದು ಹೇಳಿದರು.

ಶಕ್ತಿ ಯೋಜನೆಯಡಿ ರಾಜ್ಯದಲ್ಲಿ 600 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಪ್ರತಿನಿತ್ಯ ಜಿಲ್ಲೆಯಲ್ಲಿ 16 ಸಾವಿರ ಮಂದಿ ಬಸ್‍ನಲ್ಲಿ ಸಂಚರಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ 19 ಮಾರ್ಗದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳು ಸಂಚರಿಸಿ ಶಕ್ತಿ ಯೋಜನೆ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ಸಚಿವರು ನುಡಿದರು.

ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಇಡೀ ದೇಶದಲ್ಲಿಯೇ ಮಾದರಿಯಾಗಿದ್ದು, ಗ್ಯಾರಂಟಿ ಯೋಜನೆ ರೂಪಿಸಿರುವುದು ಕರ್ನಾಟಕದ ಹೆಮ್ಮೆ ಎಂದು ಸಚಿವರು ಹೇಳಿದರು.

  ಸರ್ಕಾರಿ ಬಸ್‍ನಲ್ಲಿ ಮಹಿಳೆಯರು ರಾಜ್ಯಾದ್ಯಂತ ಓಡಾಡಬಹುದಾಗಿದೆ. 200 ಯೂನಿಟ್ ವರೆಗೆ ಉಚಿತ ವಿದ್ಯುತ್, ಗೃಹ ಭಾಗ್ಯ ಯೋಜನೆಯಡಿ 2 ಸಾವಿರ ರೂ., ಕಲ್ಪಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಯಾವುದೇ ಧರ್ಮ, ಜಾತಿ ನೋಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲಾ ಜನರಿಗೂ ತಲುಪುತ್ತಿದ್ದು, ನುಡಿದಂತೆ ನಡೆಯುತ್ತಿರುವ ಸರ್ಕಾರವಾಗಿದೆ ಎಂದು ಹೇಳಿದರು.

ಮುಂದಿನ ಜನವರಿಯಿಂದ ‘ಇಂದಿರಾ ಆಹಾರ ಕಿಟ್’ ಯೋಜನೆ ಜಾರಿಗೆ ಬರಲಿದ್ದು, ಬಡ ಜನರ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ ಎಂದು ಎನ್.ಎಸ್.ಭೋಸರಾಜು ಅವರು ವಿವರಿಸಿದರು.

ಗ್ಯಾರಂಟಿ ಯೋಜನೆಗಳ ಜೊತೆಗೆ ಸರ್ಕಾರ ಜಿಲ್ಲೆಯ ಎರಡು ಕ್ಷೇತ್ರಗಳಿಗೂ ತಲಾ 55 ಕೋಟಿ ರೂ. ನೀಡಿದೆ. ಹಾಗೆಯೇ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಗಮನಹರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ವಿವರಿಸಿದರು.

ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಮಾಜಿಕ ನ್ಯಾಯಾದ ಪರಿಕಲ್ಪನೆಯಲ್ಲಿ ನಡೆಯುತ್ತಿದ್ದು, ಎಲ್ಲಾ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡಿದೆ. ಗ್ಯಾರಂಟಿ ಕಾರ್ಯಕ್ರಮಗಳು ಬಡ ಜನರ ಖಾತೆಗೆ ಹಣ ನೇರವಾಗಿ ತಲುಪುತ್ತಿದೆ. ಯಾವುದೇ ಯೋಜನೆ ಜಾರಿಗೊಳಿಸಲು ಜನ ಬೆಂಬಲ ಇರಬೇಕು. ಬಡವರ, ಶೋಷಿತರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಕಳೆದ ಎರಡೂವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಾಗಿ ಒಂದೂವರೆ ಲಕ್ಷ ರೂ. ನೀಡಲಾಗಿದೆ. ಪ್ರಜಾಪ್ರಭುತ್ವ ಗೆಲುವಿಗೆ ಎಲ್ಲರೂ ಕೈಜೋಡಿಸಬೇಕು. ಗ್ಯಾರಂಟಿ ಯೋಜನೆಗಳು ಸಾಧಾರಣ ಯೋಜನೆಯಲ್ಲ ಎಂದು ಎ.ಎಸ್.ಪೊನ್ನಣ್ಣ ಅವರು ಒತ್ತಿ ಹೇಳಿದರು.

ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಪಂಚ ಗ್ಯಾರಂಟಿ ಯೋಜನೆ ಜೊತೆ ವಸತಿ ಯೋಜನೆಯು ಗ್ಯಾರಂಟಿಯಾಗಿ ಜಾರಿಗೊಳಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

ಕೊಡಗು ಜಿಲ್ಲೆಯಲ್ಲಿ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಿಗೆ ವಸತಿ ಯೋಜನೆ ಜೊತೆಗೆ ಆಧಾರ್ ಕಾರ್ಡ್, ಪಡಿತರ ಇತರೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಡಾ.ಮಂತರ್ ಗೌಡ ಅವರು ಸಲಹೆ ಮಾಡಿದರು.

ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿ ಪರಿಣಾಮ ಬೀರಿದ್ದು, ಅದರಲ್ಲಿ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಕ್ತಿ ತುಂಬಿದೆ ಎಂದು ಅವರು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷರಾದ ಎಚ್.ಎಂ.ರೇವಣ್ಣ ಅವರು ಮಾತನಾಡಿ ಜಿಲ್ಲೆಯಲ್ಲಿ ಶೇ.98 ಕ್ಕೂ ಹೆಚ್ಚು ಪಂಚ ಗ್ಯಾರಂಟಿ ಯೋಜನೆಗಳು ತಲುಪುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಇಂದಿರಾಗಾಂಧಿ ಕಾಲದಲ್ಲಿ 20 ಅಂಶಗಳ ಕಾರ್ಯಕ್ರಮ ಜಾರಿಗೊಳಿಸಿದ್ದರು. ವೃದ್ಧಾಪ್ಯ ವೇತನ, ವಿಕಲಚೇತನರ ವೇತನ, ಉಳುವವನಿಗೆ ಭೂಮಿ, ಬ್ಯಾಂಕ್‍ಗಳ ರಾಷ್ಟ್ರೀಕರಣ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರು,           ಅದೇ ಅವಧಿಯಲ್ಲಿ ಡಿ.ದೇವರಾಜ ಅರಸು ಅವರು ಇಂದಿರಾಗಾಂಧಿ ಅವರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಿದ್ದರು, ಡಿ.ದೇವರಾಜ ಅರಸು ಅವರ ಕಾರ್ಯಕ್ರಮಗಳು ಇಂದಿಗೂ ಸಹ ಸ್ಮರಣೀಯ ಎಂದರು.

ಹಾಗೆಯೇ ಆರ್.ಗುಂಡೂರಾವ್ ಅವರು ಯುವಜನರಿಗೆ ಉದ್ಯೋಗ ಕಲ್ಪಿಸಲು ಪ್ರಯತ್ನಿಸಿದರು. ಎಸ್.ಬಂಗಾರಪ್ಪ ಅವರು ಆಶ್ರಯ, ಆರಾಧನಾ, ಗ್ರಾಮೀಣ ಕೃಪಾಂಕ, ಮತ್ತಿತರವನ್ನು ಜಾರಿಗೊಳಿಸಿದ್ದರು, ಹಾಗೆಯೇ ವೀರಪ್ಪ ಮೊಯಿಲಿ ಅವರು ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಿಇಟಿ ಜಾರಿಗೊಳಿಸಿ ಇಡೀ ದೇಶದಲ್ಲಿಯೇ ಮಾದರಿಯಾದರು. ಅದೇ ರೀತಿ ಎಸ್.ಎಂ.ಕೃಷ್ಣ ಅವರು ಬೆಂಗಳೂರು ಐಟಿ ಬಿಟಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಅವಲೋಕನ ಮಾಡಬೇಕು ಎಂದು ಎಚ್.ಎಂ.ರೇವಣ್ಣ ಅವರು ಸಲಹೆ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಅವಧಿಯಲ್ಲಿ 165 ಭರವಸೆಯಲ್ಲಿ ಹಲವು ಭಾಗ್ಯ ನೀಡುವ ಮೂಲಕ 165 ಭರವಸೆಯನ್ನೂ ಈಡೇರಿಸಿದ್ದರು, ಈ ಅವಧಿಯಲ್ಲಿ ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು ಎಚ್.ಎಂ.ರೇವಣ್ಣ ಅವರು ವಿವರಿಸಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ತಳಮಟ್ಟದಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕು. ಗ್ಯಾರಂಟಿ ಯೋಜನೆ ಪಡೆಯಲು ತಲಾದಾಯ ಮತ್ತಿತರ ಕಾರಣಗಳಿಂದ ಸಮಸ್ಯೆಯಾಗಿದ್ದ ಕುಟುಂಬಗಳಿಗೆ ಸರಿಪಡಿಸಲು ಕ್ರಮವಹಿಸಲಾಗಿದೆ. ಆ ನಿಟ್ಟಿನಲ್ಲಿ 1.20 ಲಕ್ಷ ಕುಟುಂಬಗಳಲ್ಲಿ 59 ಸಾವಿರ ಕುಟುಂಬಗಳ ಜಿಎಸ್‍ಟಿ ಮತ್ತಿತರ ಸಂಬಂಧ ಸರಿಪಡಿಸಲು ಶ್ರಮಿಸಲಾಗಿದೆ.   ರಾಜ್ಯದಲ್ಲಿ 7 ರಿಂದ 8 ಸಾವಿರ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ತಲುಪುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್ ಅವರು ಮಾತನಾಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಹೆಣ್ಣು ಮಕ್ಕಳ ಕಣ್ಣೀರು ಒರೆಸುವ ಕೆಲಸ ಮಾಡಿದೆ ಎಂದು ಪ್ರತಿಪಾದಿಸಿದರು.

ಸರ್ಕಾರದ ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ. ಟೀಕೆಗಳು ಸಾಯುತ್ತವೆ. ಆದ್ದರಿಂದ ಯಾವುದೇ ಟೀಕೆಗೆ ಎದೆ ಗುಂದದೆ ಸರ್ಕಾರದ ಕಾರ್ಯಕ್ರಮಗಳು ತಲುಪುತ್ತಿವೆ ಎಂದು ಪುಷ್ಪ ಅಮರನಾಥ್ ಅವರು ಹೇಳಿದರು.

ಸಂವಿಧಾನದ ಆಶಯಗಳನ್ನು ಈಡೇರಿಸಲು ಶ್ರಮಿಸಲಾಗಿದೆ. ಇಡೀ ದೇಶದಲ್ಲಿಯೇ ಕರ್ನಾಟಕ ಮಾದರಿ ರಾಜ್ಯ ಎಂದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಮೆಹರೂಜ್ ಖಾನ್ ಅವರು ಮಾತನಾಡಿ ಸರ್ಕಾರ ಎಲ್ಲರಿಗೂ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಬಲೀಕರಣ ಕಲ್ಪಿಸಲು ಶ್ರಮಿಸಿದೆ ಎಂದರು.

ರಾಜ್ಯದಲ್ಲಿ 900 ಕೆಪಿಎಸ್ ಶಾಲೆ ತೆರೆಯಲು ಮುಂದಾಗಲಾಗಿದೆ. 36 ಸಾವಿರ ಬಡವರಿಗೆ ಮನೆ ನಿರ್ಮಿಸಲು ಕ್ರಮವಹಿಸಲಾಗಿದೆ. ಇನ್ನೂ ಹೆಚ್ಚಿನ ಮನೆ ನಿರ್ಮಿಸಲು ಮುಂದಾಗಲಾಗಿದೆ ಎಂದರು.

ಹಿಂದೆ ನಿರುದ್ಯೋಗ ಸಮಸ್ಯೆ 4.4 ರಷ್ಟು ಇತ್ತು. ಈಗ ಶೇ.2.3 ಕ್ಕೆ ಇಳಿದಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಮಹಿಳೆಯ ಉದ್ಯಮ ಶೀಲತೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಶಕ್ತಿ ಬಂದಿದ್ದು, ರಾಜ್ಯದಲ್ಲಿ ತಲಾ ಆದಾಯ, ಜಿಎಸ್‍ಟಿ ಪಾವತಿಯಲ್ಲಿ ಮೊದಲ ಸ್ಥಾನ ಹಾಗೂ ನಿರುದ್ಯೋಗ ಸಮಸ್ಯೆ ಪರಿಹರಿಸುವಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಮುತ್ತುರಾಜ್ ಅವರು ಗ್ಯಾರಂಟಿ ಯೋಜನೆಯಿಂದ ರಾಜ್ಯದ ಅಭಿವೃದ್ಧಿ ಕುಂಟಿತವಾಗಿಲ. ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ಪ್ರತಿಯೊಬ್ಬರ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗಿದೆ. ಮಾರುಕಟ್ಟೆಯಲ್ಲಿ ಕೊಳ್ಳುವವರ ಶಕ್ತಿ ಹೆಚ್ಚಾಗಿದೆ. ಇದರಿಂದ ತೆರಿಗೆ ಸಂಗ್ರಹವು ದ್ವಿಗುಣಗೊಂಡಿದೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ದೇಶದಲ್ಲಿಯೇ ಮೊದಲ ಸ್ಥಾನಕ್ಕೆ ಹೆಜ್ಜೆ ಇಡುತ್ತಿರುವುದನ್ನು ಯಾರೂ ಸಹ ತಳ್ಳಿ ಹಾಕುವಂತಿಲ್ಲ. ಇದರಿಂದ ಜಿಎಸ್‍ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯದ ಬಜೆಟ್ 4 ಲಕ್ಷ ಕೋಟಿ ಇದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.

ರಾಜ್ಯದ ಸಾಲ ರಾಷ್ಟ್ರದ ಸಾಲಕ್ಕೆ ಹೋಲಿಸಿದರೆ ಕಡಿಮೆ ಎಂಬುದನ್ನು ಗಮನಿಸಬೇಕಿದೆ. ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕಿಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದೆ ಎಂದು ನುಡಿದರು.

‘ನಾಡಿನ ಸಾಂಸ್ಕøತಿಕ ನಾಯಕ ಬಸವಣ್ಣ ಅವರು ಹೇಳಿರುವಂತೆ ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆ ಈ ನಿಟ್ಟಿನಲ್ಲಿ ಸರ್ಕಾರ ಸಾಗುತ್ತಿರುವುದು ಪ್ರತಿಯೊಬ್ಬರೂ ಸ್ಮರಿಸಲೇ ಬೇಕಿದೆ ಎಂದು ಮುತ್ತುರಾಜು ಅವರು ಹೇಳಿದರು.’

ಸಂಪತ್ತು ಕೆಲವೇ ಕೆಲವು ಜನರಲ್ಲಿ ಇರಬಾರದು. ಅದನ್ನು ಎಲ್ಲರಿಗೂ ಹಂಚುವುದು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರಪಂಚದ 45 ರಾಷ್ಟ್ರಗಳಲ್ಲಿ ಉಚಿತ ಯೋಜನೆಗಳು ಜಾರಿಯಲ್ಲಿವೆ. ಆ ನಿಟ್ಟಿನಲ್ಲಿ ಚಿಂತಕರು, ಆರ್ಥಿಕ ತಜ್ಞರು, ನೋಬಲ್ ಪ್ರಶಸ್ತಿ ವಿಜೇತರು ಪ್ರತಿಪಾದಿಸಿದ್ದಾರೆ ಎಂದು ನುಡಿದರು.

ಗ್ಯಾರಂಟಿ ಯೋಜನೆಗಳು ಜನರ ಮನಃ ಗೆದ್ದಿದ್ದು, ಸ್ವಾತಂತ್ರ್ಯ, ಸಮಾನತೆ, ಸ್ವಾಭಿಮಾನ ತಂದಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಮುತ್ತು ಅವರು ನುಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಮಾತನಾಡಿ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಕಾರ್ಯಕ್ರಮಗಳನ್ನು ಶೇ.99 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ತಲುಪುತ್ತಿದ್ದು, ಪ್ರಗತಿ ಸಾಧಿಸಲಾಗಿದೆ ಎಂದರು.

ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾದ ರಂಗಸ್ವಾಮಿ, ಆಶಾಲತಾ ಸೇರಿದಂತೆ ಹಲವರು ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ, ಯುವಜನರಿಗೆ ಅನುಕೂಲವಾಗಿದ್ದು, ಇದರ ಸದ್ಭಳಕೆಯಿಂದ ಕುಟುಂಬ ನಿರ್ವಹಣೆ, ಶಿಕ್ಷಣ, ಆರೋಗ್ಯ, ಮತ್ತಿತರ ಕಾರ್ಯಕ್ಕೆ ತುಂಬಾ ಅನುಕೂಲವಾಗಿದೆ ಎಂದು ಅವರು ಹೇಳಿದರು.

ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆಯ ಈ.ರಾಜು ಮತ್ತು ತಂಡದವರು ಗ್ಯಾರಂಟಿ ಯೋಜನೆ ಕುರಿತು ಹಾಡು ಹಾಡಿ ಗಮನ ಸೆಳೆದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಸ್ವಾಗತಿಸಿದರು. ಪವನ್ ಕುಮಾರ್ ನಿರೂಪಿಸಿದರು. ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ವಂದಿಸಿದರು.

 ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಮಂದ್ರೀರ ಮೋಹನ್‍ದಾಸ್(ಮಡಿಕೇರಿ), ಕಾಂತರಾಜು(ಸೋಮವಾರಪೇಟೆ), ವಿ.ಪಿ.ಶಶಿಧರ (ಕುಶಾಲನಗರ), ಪಿ.ವಿ.ಜಾನ್ಸನ್(ವಿರಾಜಪೇಟೆ), ಕಾಳಿಮಾಡ ಪ್ರಶಾಂತ್(ಪೊನ್ನಂಪೇಟೆ), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಆಹಾರ ಇಲಾಖೆ ಜಂಟಿ ನಿರ್ದೇಶಕರಾದ ಮಂಟೆಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಡಿ.ಆರ್. ಪ್ರಸನ್ನ ಕುಮಾರ್, ಮಡಿಕೇರಿ ಘಟಕ,ಕ.ರಾ.ರ.ಸಾ ನಿಗಮ, ವ್ಯವಸ್ಥಾಪಕರಾದ ಎ. ಈರಶಪ್ಪ, ಸೆಸ್ಕ್  ಕಾರ್ಯಪಾಲಕ ಅಭಿಯಂತರರಾದ ರಾಮಚಂದ್ರ, ಜಿಲ್ಲಾ ಉದ್ಯೋಗ ವಿನಿಯಮ ಕೇಂದ್ರ ಜಿಲ್ಲಾ ಉದ್ಯೋಗಾಧಿಕಾರಿ ಮಂಜುನಾಥಸಿ.ಬಿ.ಇತರರು ಇದ್ದರು.

ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಕಾರ್ಯಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನ ಮಳಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು. ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿ ಒಳಗೊಂಡ ವಸ್ತುಪ್ರದರ್ಶನ ಮಳಿಗೆ ಗಮನ ಸೆಳೆಯಿತು.

coorg buzz
coorg buzz