ದೀರ್ಘ ಕಾಲದಿಂದ ಬ್ಯಾಂಕ್‍ನಲ್ಲಿರುವ ತಮ್ಮ ಹಣ ಪಡೆಯದೆ ಉಳಿದಿರುವ ಠೇವಣಿ, ವಿಮಾ ಕಂತುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರು ಹಣವನ್ನು ವಾಪಸ್ಸು ಪಡೆಯುವ ಸಂಬಂಧ ‘ನಿಮ್ಮ ಹಣ ನಿಮ್ಮ ಹಕ್ಕು’ ಜಾಗೃತಿ ಶಿಬಿರಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೋಮವಾರ ಚಾಲನೆ ನೀಡಿದರು. ನಗರದ ಜಿ.ಪಂ.ಸಭಾಂಗಣದಲ್ಲಿ ನಡೆದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿವಿಧ ಕಾರಣಗಳಿಂದ ಬ್ಯಾಂಕ್‍ನಲ್ಲಿ ದೀರ್ಘಕಾಲದಿಂದ ಇರುವ ಹಣ ಹಾಗೂ ವಿಮಾ ಕಂತನ್ನು ಪಡೆಯದಿರುವ ಗ್ರಾಹಕರಿಗೆ ಮಾಹಿತಿ ನೀಡಿ ಹಣವನ್ನು ವಾಪಸ್ಸು ಪಡೆಯಲು ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
‘ಕೊಡಗು ಜಿಲ್ಲೆಯಲ್ಲಿ 1.41 ಲಕ್ಷ ಮಂದಿಯ ಬ್ಯಾಂಕ್ ಖಾತೆಯಲ್ಲಿ ದೀರ್ಘಕಾಲದಿಂದ ಸುಮಾರು 33 ಕೋಟಿಯಷ್ಟು ಹಣವಿದ್ದು, ಈ ಸಂಬಂಧ ವಾರಸುದಾರರು ಹಣ ವಾಪಸ್ಸು ಪಡೆಯಬಹುದಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಗ್ರಾಹಕರಿಗೂ ಮಾಹಿತಿ ದೊರೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಲಹೆ ಮಾಡಿದರು.’
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಮಾತನಾಡಿ ಬ್ಯಾಂಕ್‍ನಲ್ಲಿ 10 ವರ್ಷಕ್ಕಿಂತ ಹೆಚ್ಚು ಕಾಲ ನಿಷ್ಕ್ರೀಯವಾಗಿರುವ ಖಾತೆಯಲ್ಲಿನ ಹಣ ಮತ್ತು ಕ್ಲೈಮ್ ಮಾಡದ ಠೇವಣಿಯನ್ನು ಆರ್‍ಬಿಐನಿಂದ ಡಿಇಎಎಫ್ ನಿಧಿಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಗ್ರಾಹಕರು ಕಾನೂನು ಬದ್ಧ ಉತ್ತರಾಧಿಕಾರಿಗಳು ಯಾವುದೇ ಸಮಯದಲ್ಲಿ ಹಣವನ್ನು ವಾಪಸ್ಸು ಪಡೆಯಬಹುದು. ಆ ನಿಟ್ಟಿನಲ್ಲಿ ಎಲ್ಲೆಡೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು.
ಗ್ರಾಹಕರು ತಮ್ಮ ಗುರುತಿನ ದಾಖಲೆಗಳನ್ನು ಅರ್ಹತಾ ಪತ್ರದೊಂದಿಗೆ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ವಿವರಿಸಿದರು. ಆರ್‍ಬಿಐನ ಸಹಾಯಕ ಮಹಾಪ್ರಬಂಧಕರಾದ ನಿಶಾ ಅವರು ಮಾತನಾಡಿ ಭಾರತ ಹಣಕಾಸು ಸಚಿವಾಲಯದ ಮಾರ್ಗಸೂಚಿ ಪ್ರಕಾರ ಎಲ್ಲಾ ಬ್ಯಾಂಕು, ವಿಮೆ ಮತ್ತು ಇತರ ಇಲಾಖಾ ಶಾಖೆಗಳಲ್ಲಿ ಡಿಸೆಂಬರ್, 31 ರವರೆಗೆ ಕಾನೂನು ಬದ್ಧ ವಾರಸುದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ ಎಂದರು.
ದೀರ್ಘ ಕಾಲದವರೆಗೆ ಹಕ್ಕು ಪಡೆಯದ ಹಣಕಾಸಿನ ಸ್ವತ್ತುಗಳನ್ನು ಕಾನೂನು ಬದ್ಧ ವಾರಸುದಾರರಿಗೆ ಮರು ಪಡೆಯಲು ಈ ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕೆಲವು ಠೇವಣಿದಾರರಿಗೆ ತಮ್ಮ ಖಾತೆಯಲ್ಲಿರುವ ಹಣವನ್ನು ಆನ್‍ಲೈನ್ ಮೂಲಕ ಹಸ್ತಾಂತರಿಸಲಾಯಿತು. ಮಾರ್ಗದರ್ಶಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರಾದ ಗಂಗಾಧರ ನಾಯಕ್ ಅವರು ‘ನಿಮ್ಮ ಹಣ ನಿಮ್ಮ ಹಕ್ಕು’ ಶಿಬಿರದ ಮಹತ್ವ ಕುರಿತು ಮಾತನಾಡಿದರು. ನಿಮ್ಮ ಹಣ ನಿಮ್ಮ ಹಕ್ಕು ಕುರಿತು ಹೊರತಂದಿರುವ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ಆನಂದ್ ಪ್ರಕಾಶ ಮೀನಾ, ಆರ್‍ಬಿಐನ ಸಹಾಯಕ ಮಹಾಪ್ರಬಂಧಕರಾದ ನಿಶಾ ಅವರು ಬಿಡುಗಡೆ ಮಾಡಿದರು.
ಜಿಲ್ಲೆಯ ವಿವಿಧ ಬ್ಯಾಂಕುಗಳು ವ್ಯವಸ್ಥಾಪಕರು, ಭಾರತೀಯ ಜೀವ ವಿಮಾ ನಿಗಮದ ಶಾಖಾ ವ್ಯವಸ್ಥಾಪಕರು ಇತರರು ಇದ್ದರು. ಮತ್ತಷ್ಟು ಮಾಹಿತಿ: ನಿಮ್ಮ ಹಳೆಯ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಮರೆತು ಬಿಟ್ಟಿರುವಿರಾ? ಆರ್‍ಬಿಐ ನಿಮಗೆ ಸೇರಿದ್ದ ಹಣವನ್ನು ಮರಳಿ ಪಡೆಯಲು ನೆರವಾಗುತ್ತಿದೆ.
ನಿಮ್ಮ ಬ್ಯಾಂಕ್‍ನ ನಿಷ್ಕ್ರೀಯ ಖಾಖೆಯಲ್ಲಿರುವ(ಎರಡರಿಂದ ಹತ್ತು ವರ್ಷದವರೆಗೂ ಚಲನೆ ಇಲ್ಲದ) ಹಣ/ಕ್ಲೈಮ್ ಮಾಡದ ಡೆಪಾಸಿಟ್‍ಗಳು (10 ವರ್ಷಕ್ಕೂ ಹೆಚ್ಚು) ಆರ್‍ಬಿಐನ ಫಂಡ್‍ಗೆ ವರ್ಗಾಯಿಸಲ್ಪಡುತ್ತದೆ. ನೀವು ಅಥವಾ ನಿಮ್ಮ ಕಾನೂನು ಬದ್ಧ ವಾರಸುದಾರರು ಯಾವಾಗ ಬೇಕಾದರೂ ಕ್ಲೈಮ್ ಮಾಡಬಹುದು. ನಿಮ್ಮ ಹಣ ಕ್ಲೈಮ್ ಮಾಡಲು ಬ್ಯಾಂಕ್‍ನ ಖಾತೆಗೆ ಭೇಟಿ ನೀಡುವುದು. ಕೆವೈಸಿ ದಾಖಲೆಯೊಂದಿಗೆ ಒಂದು ಫಾರಂ ಸಲ್ಲಿಸುವುದು (ಆಧಾರ್, ಪಾಸ್‍ಪೋರ್ಟ್, ಚುನಾವಣಾ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್) ನಿಮ್ಮ ಕ್ಲೈಮ್ ಆಗಿಲ್ಲದ ಠೇವಣಿಗಳ ಬಗ್ಗೆ ತಿಳಿಯಲು https://udgam.rbi.org.in ನ್ನು ಸಂಪರ್ಕಿಸಬಹುದು.



