ಯುವ ಸಮೂಹದಲ್ಲಿ ಕ್ಷೀಣಿಸುತ್ತಿರುವ ಪತ್ರಿಕೆ, ಪುಸ್ತಕ ಓದು – ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ – ಜಗದೀಶ್‌ ಜೋಡುಬೀಟಿ ಕಳವಳ

Share this post :

ಗೋಣಿಕೊಪ್ಪ : ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಪತ್ರಕರ್ತ ಜಗದೀಶ್ ಜೋಡುಬೀಟಿ ಹೇಳಿದರು.
ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ, ಗೋಣಿಕೊಪ್ಪ ಕಾವೇರಿ ಕಾಲೇಜು ಎನ್‌ಎಸ್‌ಎಸ್‌ ಘಟಕ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ವಾರ್ಷಿಕ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪತ್ರಿಕಾ ಮಾಧ್ಯಮ, ಸಾಮಾಜಿಕ ಜಾಲತಾಣ ಹಾಗೂ ಯುವಜನತೆ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಪತ್ರಿಕೆಗಳು ವಿಶ್ವಾಸಾರ್ಹ ಮಾಹಿತಿಯ ಮೂಲವಾಗಿದೆ. ಯುವ ಜನರಿಗೆ ವಿಭಿನ್ನ ವಿಷಯಗಳ ಬಗ್ಗೆ ತಿಳುವಳಿಕೆಯನ್ನು ನೀಡುತ್ತವೆ. ಪತ್ರಿಕೆಗಳನ್ನ ಹೆಚ್ಚು ಹೆಚ್ಚು ಓದುವುದರಿಂದ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ.
ಆದರೆ ಇಂದಿನ ಯುವಜನತೆ ಪತ್ರಿಕೆ ಹಾಗೂ ಪುಸ್ತಕ ಓದುವುದನ್ನು ಕಡಿಮೆ ಮಾಡಿ, ಮೊಬೈಲ್ ಫೋನ್ ಕಡೆಗೆ ಆಕರ್ಷಿತರಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ವಿಷಾಧಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ನೈತಿಕ ಮೌಲ್ಯಗಳು ಮರೆಯಾಗಿರುವ ಈ ಸಂದರ್ಭದಲ್ಲಿ, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ, ಪರಿಸರ ಸಂರಕ್ಷಣೆ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದರು.
ಹುದಿಕೇರಿ ಕ್ಲಸ್ಟರ್ ಸಿಆರ್‌ಪಿ ಸೌಮ್ಯ ಮಾತನಾಡಿದರು. ಎನ್‌ಎಸ್‌ಎಸ್ ಅಧಿಕಾರಿಗಳಾದ ಮಂಡಂಗಡ ಎ. ಕುಶಾಲಪ್ಪ, ಪುತ್ತಾಮನೆ ಪೂಜಾ ಶರಣು ಉಪಸ್ಥಿತರಿದ್ದರು.

coorg buzz
coorg buzz