ನವೆಂಬರ್ 26ರಂದು ಸಂವಿಧಾನ ದಿನಾಚರಣೆ : ಅಗತ್ಯ ಸಿದ್ಧತೆಗೆ ಎಡಿಸಿ ಆರ್. ಐಶ್ವರ್ಯ ಸೂಚನೆ

Share this post :

ಮಡಿಕೇರಿ : ನವೆಂಬರ್ 26 ರಂದು ಸಂವಿಧಾನ ದಿನಾಚರಣೆಯನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚಿಸಿದ್ದಾರೆ.
ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಅವರು, ಸರ್ಕಾರ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸೂಚಿಸಿದೆ. ಆ ದಿಸೆಯಲ್ಲಿ ಜಾಥಾ ಹಾಗೂ ಸಭಾ ಕಾರ್ಯಕ್ರಮ ಏರ್ಪಡಿಸಿ ಸಂವಿಧಾನದ ಮಹತ್ವ ಕುರಿತು ಉಪನ್ಯಾಸ ನೀಡುವಂತಾಗಬೇಕು. ಕಾರ್ಯಕ್ರಮ ಆಯೋಜನೆ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸರ್ಕಾರೇತರ ಸಂಸ್ಥೆಗಳು ಹಾಗೂ ವಿವಿಧ ಸಮಾಜದ ಮುಖಂಡರನ್ನು ಆಹ್ವಾನಿಸಿ ಸಂವಿಧಾನ ದಿನ ಆಚರಿಸುವಂತೆ ನಿರ್ದೇಶನ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಮಾತನಾಡಿ, ತೆರೆದ ವಾಹನದಲ್ಲಿ ಅಂಬೇಡ್ಕರ್ ವೇಷಧಾರಿ ವಿದ್ಯಾರ್ಥಿ ಒಳಗೊಂಡಂತೆ ಸಂವಿಧಾನ ಪುಸ್ತಕ ಪ್ರದರ್ಶಿಸಿ ತೆರಳಬೇಕಿದೆ. ಅಂಬೇಡ್ಕರ್ ಅವರ ಚಿಂತನೆಗಳು, ಸಂವಿಧಾನದ ಆಶಯಗಳು, ಮೂಲಭೂತ ಕರ್ತವ್ಯಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳು ಮತ್ತಿತರ ಮಾಹಿತಿ ಒಳಗೊಂಡ ಭಿತ್ತಿ ಪತ್ರಗಳ ಪ್ರದರ್ಶನ ಕಾರ್ಯಕ್ರಮ ಆಯೋಜಿಸಬೇಕಿದೆ ಎಂದರು.
ತಹಶೀಲ್ದಾರ್‌ ಪ್ರವೀಣ್, ಕಿರಣ್ ಗೌರಯ್ಯ, ಶ್ರೀಧರ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ತಾ.ಪಂ.ಇಒ ಅಪ್ಪಣ್ಣ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಇತರರು ಇದ್ದರು.

coorg buzz
coorg buzz