ಅಖಿಲ ಭಾರತ 72ನೇ ಸಹಕಾರ ಸಪ್ತಾಹ ಸಮಾರೋಪ – ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ

Share this post :

ಮಡಿಕೇರಿ : ಸಹಕಾರ ಸಂಘಗಳ ಬೆಳವಣಿಗೆ ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಸಹಕಾರ ಸಂಘಗಳ ಕೊಡುಗೆ ಅಪಾರ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ‘ಉನ್ನತಿ’ ಭವನದ ಪಂದ್ಯಂಡ ಐ.ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ಗುರುವಾರ ನಡೆದ ಅಖಿಲ ಭಾರತ ೭೨ ನೇ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ ‘ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವನಾವಿನ್ಯತೆಯ ಸಹಕಾರಿ ವ್ಯವಹಾರದ ಮಾದರಿಗಳು’ ದಿನಾಚರಣೆ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನಿಂದ ಆಯ್ಕೆಗೊಂಡ ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ರೈತರ ಬದುಕಿಗೆ ಸಹಕಾರ ಸಂಘಗಳು ಬೆನ್ನುಲುಬಾಗಿದ್ದು, ಕೃಷಿ ಚಟುವಟಿಕೆಯನ್ನು ಕೈಗೊಳ್ಳಲು ಸಹಕಾರ ಸಂಘಗಳು ಸಹಕಾರಿಯಾಗಿವೆ. ರಾಷ್ಟ್ರವು ಇಂದಿಗೂ ಸಹ ಕೃಷಿ ಪ್ರಧಾನವಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆ ನಿಟ್ಟಿನಲ್ಲಿ ಕೃಷಿಗೆ ಪೂರಕವಾಗಿ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಮಾತನಾಡಿ, ಸಹಕಾರ ಸಂಘಗಳ ಬ್ಯಾಂಕ್‌ನಲ್ಲಿ ಏಕರೂಪದ ತಂತ್ರಾಂಶ ಅಳವಡಿಸಿಕೊಳ್ಳಲಾಗಿದೆ. ಜತೆಗೆ ರಾಷ್ಟ್ರೀಕೃತ ಬ್ಯಾಂಕ್ ಮಾದರಿಯಲ್ಲಿ ಸಹಕಾರ ಬ್ಯಾಂಕ್‌ಗಳಲ್ಲಿಯೂ ಸಹ ಡಿಜಿಟಲೀಕರಣಕ್ಕೆ ಮುಂದಾಗಲಾಗಿದೆ. ನಬಾರ್ಡ್ ಪ್ರಾಯೋಜಕತ್ವದಲ್ಲಿ ಸಹಕಾರ ಬ್ಯಾಂಕ್‌ ಅನ್ನು ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲಾಗುತ್ತದೆ. ಸಹಕಾರ ಬ್ಯಾಂಕ್‌ಗಳಲ್ಲಿ ಪಾರದರ್ಶಕತೆ ಅಳವಡಿಸಿಕೊಂಡು ಬ್ಯಾಂಕುಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ವಿವರಿಸಿದರು.
ಕೊಡಗು ಡಿಸಿಸಿ ಬ್ಯಾಂಕ್ ೨೪ ಶಾಖೆಗಳನ್ನು ಹೊಂದಿದ್ದು, ಉಳಿದಂತೆ ತಿತಿಮತಿ, ಕಕ್ಕಬ್ಬೆ, ಗುಡ್ಡೆಹೊಸೂರು ಮತ್ತಿತರ ಕಡೆಗಳಲ್ಲಿ ಡಿಸಿಸಿ ಬ್ಯಾಂಕ್ ಶಾಖೆಗಳನ್ನು ಆರಂಭಿಸಲಾಗುತ್ತದೆ. ಇದರಿಂದ ರೈತರಿಗೆ ಸಾಲ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ. ಕೊಡಗು ಜಿಲ್ಲೆಯ ಸಹಕಾರ ಕ್ಷೇತ್ರದ ದೊಡ್ಡಯ್ಯ ಅವರ ಭಾವಚಿತ್ರವನ್ನು ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಕಚೇರಿಯಲ್ಲಿ ಅಳವಡಿಸಲು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ರಾಬಿನ್ ದೇವಯ್ಯ, ಕೊಡಗು ಸಹಕಾರ ರತ್ನ ಪ್ರಶಸ್ತಿ ಪಡೆದ ಹಿರಿಯ ಸಹಕಾರಿ ಚಿರಿಯಪಂಡ ಕೆ.ಉತ್ತಪ್ಪ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕಿ ಎಂ.ಎಂ. ಶ್ಯಾಮಲಾ ಮಾತನಾಡಿದರು.
ಶ್ರೇಷ್ಠ ಸಹಕಾರಿಗಳಾದ ಎಚ್.ಎಸ್.ಮುದ್ದಪ್ಪ, ತಳೂರು ಕಿಶೋರ್ ಕುಮಾರ್, ಶ್ರೇಷ್ಠ ಮಹಿಳಾ ಸಹಕಾರಿ ದೇವಾಂಬಿಕಾ ಮಹೇಶ್, ಉತ್ತಮ ಸಹಕಾರಿ ಸಿಬ್ಬಂದಿ ಆಲೆಮಾಡ ಎಸ್.ಕಾವೇರಮ್ಮ ಅವರಿಗೆ ಇದೇ ಸಂದರ್ಭದಲ್ಲಿ ಶಾಲೂ, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕ ಎಚ್.ಕೆ.ಮಾದಪ್ಪ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ ಉಪಾಧ್ಯಕ್ಷರಾದ ಕೆ.ಹರೀಶ್ ಪೂವಯ್ಯ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರಾದ ಮನುಮುತ್ತಪ್ಪ, ಕೆ.ಎಂ.ತಮ್ಮಯ್ಯ, ಅಜಯ್ ಕುಮಾರ್, ಶ್ಯಾಮಚಂದ್ರ, ಕೆ.ಟಿ.ಪರಮೇಶ್, ಬಲ್ಲಾರಂಡ ಮಣಿಉತ್ತಪ್ಪ, ಅಮೃತ್ ವಿ.ಸಿ., ಎಸ್.ಆರ್.ಸುನೀಲ್ ರಾವ್, ಎ.ಸಿ.ಕುಶಾಲಪ್ಪ, ಎಂ.ಟಿ.ಸುಬ್ಬಯ್ಯ, ಎ.ಎಂ.ಮುತ್ತಪ್ಪ, ಪಿ.ಎಂ. ಚಂದ್ರಪ್ರಕಾಶ್, ಎಚ್.ಎಂ.ರಮೇಶ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕರಾದ ಹೊಸೂರು ಸತೀಶ್ ಕುಮಾರ್, ಕಾಂಗೀರ ಸತೀಶ್, ಅರುಣ್ ಭೀಮಯ್ಯ, ಪಿ.ಪಿ.ಪೆಮ್ಮಯ್ಯ, ಕಿಲನ್ ಗಣಪತಿ, ಶರತ್ ಶೇಖರ್, ನಾಪಂಡ ಉಮೇಶ್ ಉತ್ತಪ್ಪ, ಪಟ್ರಪಂಡ ರಘುನಾಣಯ್ಯ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ವೃತ್ತಿಪರ ನಿರ್ದೇಶಕರಾದ ಮುಂಡಂಡ ಸಿ.ನಾಣಯ್ಯ, ಎ.ಗೋಪಾಲಕೃಷ್ಣ, ಸಹಕಾರ ಸಂಘಗಳ ಉಪ ನಿಬಂಧಕರಾದ ಎಚ್.ಡಿ. ರವಿಕುಮಾರ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪ ನಿರ್ದೇಶಕರಾದ ಎಂ.ಎನ್.ಹೇಮಾವತಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶೈಲಜಾ ಹಾಗೂ ಇತರರು ಇದ್ದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಕೆ. ಮಾದಪ್ಪ ಸ್ವಾಗತಿಸಿದರು. ಮಂಜುಳ ಪ್ರಾರ್ಥಿಸಿದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಸಿಇಒ ಯೋಗೇಂದ್ರ ನಾಯಕ್ ನಿರೂಪಿಸಿ, ವಂದಿಸಿದರು.

coorg buzz
coorg buzz