ಮಡಿಕೇರಿ : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಲವು ಸಾಧಕರಿಗೆ ಶಿಕ್ಷಣ ಕೊಟ್ಟ ಸಂಸ್ಥೆ. ಈ ಕಾಲೇಜಿನ ಈಗಿನ ಪರಿಸ್ಥಿತಿ ನೋಡಿದಾಗ ಬಹಳ ಬೇಸರವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಲ್. ಧರ್ಮ ಹೇಳಿದರು.
ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ನಾನು ಕೂಡಾ ಈ ಕಾಲೇಜಿನ ಹಳೆ ವಿದ್ಯಾರ್ಥಿ. ದಶಕದ ಹಿಂದೆ ಇದ್ದ ಚಿತ್ರಣ ಈಗ ಇಲ್ಲ. ಹಲವು ರೀತಿಯಲ್ಲಿ ಬದಲಾಗಿದೆ. ಕಾಲೇಜಿನ ಪರಿಸರವನ್ನು ನೋಡಿದಾಗ ಮನಸ್ಸಿಗೆ ಬಹಳ ನೋವಾಗುತ್ತಿದೆ. ಸಾವಿರಾರು ವ್ಯಕ್ತಿಗಳಿಗೆ ಶಿಕ್ಷಣ ನೀಡಿದ ಸಂಸ್ಥೆಯ ಪರಿಸ್ಥಿತಿ ಹೀಗೆ ಮುಂದುವರೆಯಬಾರದು. ಉತ್ತಮ ರೀತಿಯ ಬದಲಾವಣೆಗೆ ಎಲ್ಲರು ಮುಂದಾಗಬೇಕೆಂದು ಕರೆ ನೀಡಿದರು.
ಕೊಡಗು ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತ ಜಿಲ್ಲೆ. ಜನರಿಗೆ ಸೃಜನಶೀಲತೆ ರಕ್ತಗತವಾಗಿ ಬಂದಿದೆ. ಶಿಕ್ಷಣ ಮಾತ್ರವಲ್ಲದೆ ಬೇರೆ ಬೇರೆ ಕ್ಷೇತ್ರದಲ್ಲಿ ಕಾಲೇಜು ಖ್ಯಾತಿ ಗಳಿಸಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಕಾಲೇಜು ನೋವಿನಲ್ಲಿರುವಾಗ ಕೈಜೋಡಿಸಿ, ಏಳಿಗೆಗೆ ನೆರವಾಗಬೇಕೆಂದು ಮನವಿ ಮಾಡಿದರು.
ಕೊಡಗು ವಿವಿ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಮಾತನಾಡಿ, ಹಲವು ಇತಿಮಿತಿಗಳ ನಡುವೆ ಕಾಲೇಜು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಳೆ ವಿದ್ಯಾರ್ಥಿ ಸಂಘ ಕೂಡಾ ಕಾಲೇಜಿನ ಜೊತೆಗೆ ಉತ್ತಮ ಒಡನಾಟವಿಟ್ಟುಕೊಂಡು, ಕಾಲೇಜಿಗೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ವಿವಿ ವತಿಯಿಂದಲೂ ಕಾಲೇಜಿಗೆ ನೆರವಾಗಲಾಗುವುದೆಂದು ತಿಳಿಸಿದರು.
ಪ್ರೊಫೆಸರ್ ಆಗಿ ಪದೋನ್ನತಿ ಹೊಂದಿದ ಕಾಲೇಜಿನ ಉಪನ್ಯಾಸಕರು, ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂತೋಷಕೂಟದ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜು ಪ್ರಾಂಶುಪಾಲ ಪ್ರೊ.ಮೇಜರ್ ರಾಘವ ಬಿ ಮಾತನಾಡಿದರು. ಸಂಘದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚಂದನ್ ನಂದರಬೆಟ್ಟು ವೇದಿಕೆಯಲ್ಲಿದ್ದರು.
ಐಚಂಡ ರಶ್ಮಿ ಮೇದಪ್ಪ, ಆಪಾಡಂಡ ಜಾನ್ಸಿ ಗಣಪತಿ ಪ್ರಾರ್ಥಿಸಿದರು. ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ ಸ್ವಾಗತಿಸಿದರು. ಸಬ್ಬಂಡ್ರ ಜಗದೀಶ್ ವಂದಿಸಿದರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು.





