ಗೋಣಿಕೊಪ್ಪ : ಒಬ್ಬರ ರಕ್ತದಿಂದ ಮೂವರ ಜೀವ ಉಳಿಸಬಹುದಾಗಿದ್ದು, ಈ ಬಗ್ಗೆ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಮನವಿ ಮಾಡಿಕೊಂಡರು.
ಮಾಧ್ಯಮ ಸ್ಪಂದನ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿ ಕೇಂದ್ರ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ, ಗೋಣಿಕೊಪ್ಪ ರೋಟರಿ ಸಹಯೋಗದಲ್ಲಿ ಉಮಾಮಹೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಒಬ್ಬರು ನೀಡುವ ರಕ್ತದಿಂದ ಕನಿಷ್ಠ ಮೂವರ ಜೀವ ಉಳಿಸಲು ಸಾಧ್ಯವಿದೆ. ಇದರಿಂದ ರಕ್ತದಾನ ಮಹತ್ವವನ್ನು ಅರಿತುಕೊಂಡು ಸ್ವಯಂಪ್ರೇರಿತವಾಗಿ ನೀಡಲು ಮುಂದಾಗಬೇಕಿದೆ ಎಂದು ಮನವಿ ಮಾಡಿಕೊಂಡರು.
ಕೊಡಗು ಜಿಲ್ಲೆಯಲ್ಲಿ ರಕ್ತದ ಬೇಡಿಕೆ ಹೆಚ್ಚಾಗುತ್ತಿದ್ದು, ಶಿಬಿರ ಆಯೋಜನೆ ಮೂಲಕ ಬೇಡಿಕೆ ಪೂರೈಸಿಕೊಳ್ಳುವ ಕಾರ್ಯದಲ್ಲಿ ರಕ್ತನಿಧಿ ಕೇಂದ್ರ ತೊಡಗಿಕೊಂಡಿದೆ. ವಾರಕ್ಕೆ ಕನಿಷ್ಟ 3 ಶಿಬಿರಗಳು ರಕ್ತದಾನಕ್ಕಾಗಿ ಮೀಸಲಿಡುವ ಅನಿವಾರ್ಯತೆ ಎದುರಾಗಿದೆ. ಪ್ರಸ್ತುತ ವರ್ಷಕ್ಕೆ ಸುಮರು 100 ಶಿಬಿರ ಆಯೋಜನೆಯಾಗುತ್ತಿದ್ದು, ಇದರಿಂದ ಬೇಡಿಕೆ ಈಡೇರುತ್ತಿಲ್ಲ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಕನಿಷ್ಠ ವರ್ಷಕ್ಕೊಮ್ಮೆ ಒಂದು ಶಿಬಿರ ಆಯೋಜಿಸುವುದನ್ನು ಕಡ್ಡಾಯಗೊಳಿಸಬೇಕಿದೆ ಎಂದು ಮನವಿ ಮಾಡಿಕೊಂಡರು. 18 ವರ್ಷ ತುಂಬಿದವರು ರಕ್ತದಾನ ಮಾಡಬಹುದಾಗಿದೆ. ರಕ್ತಕ್ಕೆ ಕೃತಕವಾಗಿ ಯಾವುದು ಇಲ್ಲ ಎಂಬ ಅರಿವು ಮುಖ್ಯ. ಇದರಿಂದ ಜನರಲ್ಲಿ ರಕ್ತದಾನದ ಅರಿವು ಹೆಚ್ಚಾಗಬಹುದು ಎಂದು ಅವರು ಹೇಳಿದರು.
ಮಾಧ್ಯಮ ಸ್ಪಂದನ ಸಂಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ನೊಂದವರಿಗೆ ಸ್ಪಂದಿಸಲು ಮಾಧ್ಯಮ ಸ್ಪಂದನ ತೊಡಗಿಕೊಂಡಿದೆ. ವೈದ್ಯಕೀಯವಾಗಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚು. ಇಂತಹ ಕಾಲಘಟ್ಟದಲ್ಲಿ ಸ್ಪಂದಿಸುವ ಗುಣ ಹೆಚ್ಚು ಮಹತ್ವ ಪಡೆದುಕೊಂಡಿದೆ. ಸನ್ಮಾನ ಸ್ವೀಕರಿಸಿದವರಲ್ಲಿ ಆರೋಗ್ಯ ತುರ್ತು ಸೇವೆಗೆ ಸ್ಪಂದಿಸುವವರು ಹೆಚ್ಚಿದ್ದಾರೆ. ರಕ್ತದಾನ ಕೂಡ ಆರೋಗ್ಯದ ಭಾಗವಾಗಿದ್ದು, ಸಾರ್ವಜನಿಕರ ಸೇವೆಗೆ ಸಮಯವನ್ನು ಮೀಸಲಿಟ್ಟು ಸ್ಪಂದಿಸುತ್ತಿರುವ ಚೋಕಂಡ ಸಂಜು ಸುಬ್ಬಯ್ಯ ಅವರು ಮಾದರಿಯಾಗಿದ್ದಾರೆ. ಇವರ ಕಾರ್ಯ ಸಾಕಷ್ಟು ಜನರ ಜೀವ ಉಳಿಸಿದೆ. ಅವರಲ್ಲಿ ಸ್ಪಂದಿಸುವ ಗುಣದೊಂದಿಗೆ ಆರೋಗ್ಯಕ್ಕೆ ಪೂರಕ ಜ್ಞಾನ ಕೂಡ ಇರುವುದು ಸಾರ್ವಜನಿಕರಿಗೆ ಹೆಚ್ಚು ಸಹಾಯವಾಗುತ್ತಿದೆ ಎಂದರು.
ಕಾವೇರಿ ಪೊಮ್ಮಕ್ಕಡ ಕೂಟ ಅಧ್ಯಕ್ಷ ಕೊಟ್ಟಂಗಡ ವಿಜು ದೇವಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಇರಲಿಲ್ಲ. ಅಂತಹ ಕಾಲಘಟ್ಟದಲ್ಲಿ ಶಿಬಿರ ಆಯೋಜಿಸಿ ರಕ್ತ ನೀಡಿರುವುದು ಹೆಮ್ಮೆಯ ವಿಚಾರ. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಸಾಕಷ್ಟು ರೋಗಿಗಳಿಗೆ ರಕ್ತ ಒದಗಿಸಿದ ಬಗ್ಗೆ ಹೆಮ್ಮೆ ಇದೆ. ಮೊದಲ ಬಾರಿ ರಕ್ತದಾನ ಮಾಡಿರುವುದು ಬದುಕಿನಲ್ಲಿ ಎಲ್ಲ ರೀತಿಯ ಸೇವೆಗಳಿಗಿಂತ ಮಹತ್ವ ಎಂಬುವುದು ನನ್ನ ನಂಬಿಕೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ರಕ್ತದಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಸರ್ವ ಶ್ರೇಷ್ಠ ದಾನ ಎಂದು ಮನಸ್ಸಿನಲ್ಲಿ ನಿರ್ಧರಿಸಿದರೆ ಅದೇ ಬದುಕಿಗೆ ವಿಶೇಷವಾಗಲಿದೆ ಎಂದು ಅವರು ಹೇಳಿದರು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, 16 ನೇ ವಯಸ್ಸಿನಲ್ಲಿ ಮೊದಲು ರಕ್ತದಾನ ಮಾಡಿದೆ. ಇದರಿಂದ ಬದುಕಿನಲ್ಲಿ ರಕ್ತದಾನದ ಅರಿವು ನನಗಾಗಿದೆ. ಈ ನಿಟ್ಟಿನಲ್ಲಿ ರಕ್ತದಾನವನ್ನು ನಿರಂತರವಾಗಿ ಮುಂದುವರಿಸಿದ್ದೇನೆ. ಇದರಿಂದ ಆತ್ಮತೃಪ್ತಿ ಹೆಚ್ಚಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಸಮಿತಿ ಸದಸ್ಯೆ ಬಿ. ಆರ್. ಸವಿತಾ ರೈ ಮಾತನಾಡಿ, ಮಾಧ್ಯಮ ಸ್ಪಂದನ ಕೋವಿಡ್ ಕಾಲದಲ್ಲಿ ಅಸ್ತಿತ್ವಕ್ಕೆ ಬಂದು, ಸಾಕಷ್ಟು ಜನರ ಜೀವ ಉಳಿಸುವ ಕಾರ್ಯ ನಡೆದಿದೆ. ಮಾಧ್ಯಮ ಸ್ಪಂದನ ಸಂಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರ ಮುತುವರ್ಜಿ ನೊಂದವರಿಗೆ ಬೆಳಕಾಗಿದೆ. ಸ್ಪಂದಿಸುವ ಗುಣ ಹೆಚ್ಚಾಗುತ್ತಿದೆ ಎಂದರು.
ಗೋಣಿಕೊಪ್ಪ ರೋಟರಿ ಸಂಸ್ಥೆ ಅಧ್ಯಕ್ಷ ಪಿ. ಆರ್. ವಿಜಯ ಮಾತನಾಡಿ, ಉತ್ತಮ ಕಾರ್ಯಕ್ಕೆ ನಮ್ಮ ಸಂಸ್ಥೆ ಸ್ಪಂದಿಸಿದೆ ಎಂದರು.
ಉಮಾಮಹೇಶ್ವರಿ ದೇವಸ್ಥಾನ ಟ್ರಸ್ಟ್ ಪ್ರಮುಖರಾದ ಜಪ್ಪೆಕೋಡಿ ರಾಜ, ಉದ್ಯಮಿ ಬಿ. ಎಂ. ಪ್ರಕಾಶ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಕಾರ್ಯಕ್ರಮ ಸಂಚಾಲಕ ವಿ. ವಿ. ಅರುಣ್‌ಕುಮಾರ್ ಇದ್ದರು.
ಸಿಂಗಿ ಸತೀಶ್ ಸ್ವಾಗತಿಸಿದರು. ಕೆ.ಬಿ. ಜಗದೀಶ್ ಜೋಡುಬೀಟಿ ನಿರೂಪಿಸಿದರು. ರಕ್ತದಾನಿಗಳಿಗೆ ಹಣ್ಣು-ಹಂಪಲು ನೀಡಿ ಪ್ರೋತ್ಸಾಹಿಸಲಾಯಿತು.
ಸನ್ಮಾನ ; ಗೋಣಿಕೊಪ್ಪದ ಸ್ವಚ್ಚತಾ ಸೇವಕಿ ಗೌರಿ ರಾಜ, ವೈದ್ಯಕೀಯ ಸೇವೆ ಮೂಲಕ ತುರ್ತು ಆರೋಗ್ಯಕ್ಕಾಗಿ ನೊಂದವರಿಗಾಗಿ ಮಿಡಿಯುತ್ತಿರುವ ಚೋಕಂಡ ಸಂಜು ಸುಬ್ಬಯ್ಯ, 59 ಬಾರಿ ರಕ್ತದಾನ ಮಾಡಿರುವ ರಕ್ತದಾನಿ ಕುಲ್ಲಚಂಡ ಪ್ರಮೋದ್ ಗಣಪತಿ, 38 ಬಾರಿ ರಕ್ತದಾನ ಮಾಡಿರುವ ರಕ್ತದಾನಿ ವಿ. ವಿ. ಅರುಣ್‌ಕುಮಾರ್ ಹಾಗೂ ಆರೋಗ್ಯ ಸೇವೆ ನೀಡುತ್ತಿರುವ ಸಂತೋಷ್ ರೈ ಸನ್ಮಾನ ಸ್ವೀಕರಿಸಿದರು.



