ಪೊನ್ನಂಪೇಟೆ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ)ಯ ಅಧಿಕೃತ ಲಾಂಛನವನ್ನು ಗುರುವಾರದಂದು ಅನಾವರಣಗೊಳಿಸಲಾಯಿತು. ಸಂಸ್ಥೆಗಾಗಿ ವಿನ್ಯಾಸಗೊಳಿಸಲಾಗಿದ್ದ ನೂತನ ಲಾಂಛನವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆಗಿರುವ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಬೆಂಗಳೂರಿನ ವಿಧಾನಸೌಧದ 2ನೇ ಮಹಡಿಯಲ್ಲಿರುವ ತಮ್ಮ ಕಚೇರಿಯಲ್ಲಿ ವಿದ್ಯುಕ್ತವಾಗಿ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೊನ್ನಣ್ಣ ಅವರು, ಕ್ರೀಡೆಗಳು ಜನರ ನಡುವೆ ಸೌಹಾರ್ದತೆಯನ್ನು ಬೆಳೆಸುತ್ತವೆ. ವಿವಿಧ ಹಿನ್ನೆಲೆಯ ಜನರು ಒಟ್ಟಾಗಿ ಆಡಲು ಮತ್ತು ಒಟ್ಟಿಗೆ ಕೆಲಸ ಮಾಡಲು ಅವಕಾಶ ನೀಡುತ್ತವೆ. ಮುಖ್ಯವಾಗಿ ಕ್ರೀಡಾಕೂಟಗಳು ಸಮುದಾಯಗಳನ್ನು ಒಟ್ಟುಗೂಡಿಸುತ್ತವೆ. ಕ್ರೀಡೆಗಳು ಮನಸ್ಸಿನ ಉಲ್ಲಾಸವನ್ನು ನೀಡುವುದರ ಜೊತೆಗೆ, ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿವೆ. ಇದು ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸುತ್ತದೆ. ಈ ಕಾರಣಕ್ಕಾಗಿ ಕ್ರೀಡಾ ಸಂಸ್ಥೆಗಳು ಹೆಚ್ಚು ಮೂಡಿ ಬರಬೇಕಾಗಿದೆ ಎಂದು ಹೇಳಿದರು.
ಕ್ರೀಡೆಗಳು ಶಿಸ್ತು ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಕಲಿಸುತ್ತವೆ, ಇದು ಸಮಾಜದಲ್ಲಿ ಉತ್ತಮ ಸಂಬಂಧಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆಗಳಿಂದ ಕ್ರೀಡಾಪಟುಗಳು ನಾಯಕತ್ವದ ಗುಣಗಳನ್ನು ಮತ್ತು ತಂಡದ ಸಾಮೂಹಿಕ ಜವಾಬ್ದಾರಿಯ ಮಹತ್ವವನ್ನು ಕಲಿಯುತ್ತಾರೆ. ಕ್ರೀಡೆಯು ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಪರಸ್ಪರ ಬಾಂಧವ್ಯವನ್ನು ಬೆಸೆಯುತ್ತದೆ. ಅಲ್ಲದೇ, ಯುವಜನತೆಯು ಕ್ರಿಯಾಶೀಲರಾಗಲು ಕ್ರೀಡೆ ಅಗತ್ಯ ಎಂದು ಪೊನ್ನಣ್ಣ ಅವರು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.
ಲಾಂಛನ ಅನಾವರಣಗೊಳಿಸಿದ ಸಂದರ್ಭದಲ್ಲಿ ಕೆ.ಎಂ.ಎಸ್.ಎ. ಅಧ್ಯಕ್ಷರಾದ ಆಲೀರ ರಶೀದ್ ಉಪಾಧ್ಯಕ್ಷರಾದ ಕೇಂಗೋಟಂಡ ಎಸ್. ಸೂಫಿ, ಕುಂಡಂಡ ಎ. ರಜ್ಹಾಕ್, ಪ್ರಧಾನ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ಕೋಶಾಧಿಕಾರಿ ಆಲೀರ ಎ. ಅಬ್ದುಲ್ ಅಜ್ಹೀಜ್ಹ್, ಕ್ರೀಡಾ ಸಂಚಾಲಕರಾದ ಕತ್ತಣಿರ ಅಬ್ದುಲ್ ರಹಿಮಾನ್ (ಅಂದಾಯಿ), ನಿರ್ದೇಶಕರಾದ ಆಲೀರ ಹುಸೈನ್, ಪ್ರಮುಖರಾದ ಚೆಪ್ಪುಡಿರ ವಿಶಾಲ್ ಅಯ್ಯಣ್ಣ ಇದ್ದರು. ನಂತರ ಕೆ.ಎಂ.ಎಸ್.ಎ. ಪ್ರಮುಖರ ತಂಡ ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ ಅವರನ್ನು ಭೇಟಿ ಮಾಡಿ ಸಹಕಾರ ಬಯಸಿತು. ಇದೇ ಸಂದರ್ಭದಲ್ಲಿ ಶಾಸಕರು ನೂತನ ತಂಡಕ್ಕೆ ಶುಭ ಕೋರಿದರು.



