ಮಿಜೋರಾಂ ಸರ್ಕಾರದ ಜೊತೆಗೆ ಒಡಂಬಡಿಕೆ ಮಾಡಿಕೊಂಡ ಟೊಯೋಟಾ

Toyota

Share this post :

ಬೆಂಗಳೂರು: ಈಶಾನ್ಯ ಭಾರತದಲ್ಲಿ ಸಮಗ್ರ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಟೊಯೋಟಾ (Toyota) ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇದೀಗ ಆ ರಾಜ್ಯದಲ್ಲಿನ ಸಮಗ್ರ ಸಮುದಾಯ ಅಭಿವೃದ್ಧಿಗೆ ಮಿಜೋರಾಂ ಸರ್ಕಾರದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಮಿಜೋರಾಂನ ಐಜಾಲ್‌ ನಲ್ಲಿ ಎಂಓಯು ವಿನಿಮಯ ಸಮಾರಂಭವು ನಡೆದಿದ್ದು, ಇದು ಸಮುದಾಯ ಕೇಂದ್ರಿತ ಸಿಎಸ್ಆರ್ ಯೋಜನೆಗಳ ಮೂಲಕ ಈ ಪ್ರದೇಶದ ಪ್ರಗತಿಗೆ ಕೊಡುಗೆ ನೀಡುತ್ತಿರುವ ಟಿಕೆಎಂನ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಈ ಸಹಭಾಗಿತ್ವದ ಅಡಿಯಲ್ಲಿ ಟಿಕೆಎಂ ಸ್ಥಳೀಯ ಆಡಳಿತ ಮತ್ತು ಕಾನೂನು ಜಾರಿ ಸಂಸ್ಥೆಗಳು ಗುರುತಿಸಿರುವ ಮೂರು ಕ್ಷೇತ್ರಗಳಲ್ಲಿ ತನ್ನ ಸಿಎಸ್ಆರ್ ಚಟುವಟಿಕೆಗಳನ್ನು ಜಾರಿಗೆ ತರುತ್ತಿದೆ. ಆ ಮೂರು ಕ್ಷೇತ್ರಗಳು ಈ ಕೆಳಗಿನಂತಿವೆ:

* ವಾಣಿಜ್ಯ ಟ್ಯಾಕ್ಸಿ ಚಾಲಕರಿಗೆ ರಸ್ತೆ ಸುರಕ್ಷತಾ ಜಾಗೃತಿ
* ಸಂಚಾರ ಮೇಲ್ವಿಚಾರಣಾ ಮೂಲಸೌಕರ್ಯದ ಉನ್ನತಿ
* ವಿಪತ್ತು ನಿರ್ವಹಣಾ ಸಾಮರ್ಥ್ಯದ ಹೆಚ್ಚಳ

ಪ್ರತಿಯೊಂದು ಸಿಎಸ್ಆರ್ ಚಟುವಟಿಕೆಯನ್ನು ಸ್ಥಳೀಯ ಪ್ರದೇಶದ ಸಮಸ್ಯೆಗಳನ್ನು ಸೂಕ್ತವಾಗಿ ಪರಿಹರಿಸಲು ಮತ್ತು ರಾಜ್ಯದ ಅಗತ್ಯಗಳಿಗೆ ಸರಿಹೊಂದುವ ರೀತಿಯಲ್ಲಿ ದೀರ್ಘಕಾಲೀನ ಪರಿಣಾಮವನ್ನು ಬೀರುವಂತೆ ವಿನ್ಯಾಸಗೊಳಿಸಲಾಗಿದೆ.

ಐಜಾಲ್‌ ನಲ್ಲಿ ನಡೆದ ಎಂಓಯು ವಿನಿಮಯ ಸಮಾರಂಭದಲ್ಲಿ ಮಿಜೋರಾಂನ ಮುಖ್ಯಮಂತ್ರಿ ಶ್ರೀ ಲಾಲ್ಡುಹೋಮಾ, ಮಿಜೋರಾಂ ಸರ್ಕಾರದ ಅಧಿಕಾರಿಗಳಾದ ಐಜಾಲ್ ಉಪ ಆಯುಕ್ತರಾದ ಶ್ರೀ ಲಾಲ್‌ರಿಯಾಟ್‌ಪುಯಿಯಾ, ಸೆರ್ಚಿಪ್ ಉಪ ಆಯುಕ್ತರಾದ ಶ್ರೀ ಪಾಲ್, ಹಿರಿಯ ಸಂಚಾರ ಪೊಲೀಸ್ ಅಧೀಕ್ಷಕ ಶ್ರೀ ಸ್ಟೀಫನ್, ಸ್ಮಾರ್ಟ್ ಸಿಟಿ ಸಿಇಓ ಶ್ರೀ ಸಿ.ಸಿ. ಲಾಲ್‌ಚುವಾಂಗ್ಕಿಮಾ ಮತ್ತು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ನ ರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಕಂಟ್ರಿ ಹೆಡ್ ಶ್ರೀ ವಿಕ್ರಮ್ ಗುಲಾಟಿ, ಇತರ ಹಿರಿಯ ಅಧಿಕಾರಿಗಳು ಹಾಗೂ ಝೋಟ್ ಟೊಯೋಟಾದ ಡೀಲರ್ ಪ್ರಿನ್ಸಿಪಾಲ್ ಶ್ರೀ ಜೊರಾಮ್ಮಾವಿಯಾ ತೋಚಾವಾಂಗ್ ಉಪಸ್ಥಿತರಿದ್ದರು.

ಎಂಓಯು ಅಡಿಯಲ್ಲಿ ಟಿಕೆಎಂ ಪ್ರಸ್ತುತ ಸರ್ಕಾರಕ್ಕೆ ಎರಡು ಪ್ರಮುಖ ಸೌಲಭ್ಯಗಳನ್ನು ಹಸ್ತಾಂತರ ಮಾಡಿದೆ:

* ಎ ಎನ್ ಪಿ ಆರ್/ಸಿಸಿ ಟಿವಿ ಉಪಕರಣ: ಐಜಾಲ್‌ ಅನ್ನು ಸ್ಮಾರ್ಟ್ ಸಿಟಿಯನ್ನಾಗಿ ರೂಪಿಸುವ ಯೋಜನೆಗೆ ಪೂರಕವಾಗಿ ಟಿಕೆಎಂ 34 ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (ಎ ಎನ್ ಪಿ ಆರ್) ಕ್ಯಾಮೆರಾಗಳು ಮತ್ತು 20 ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್ (ಸಿಸಿ ಟಿವಿ) ಘಟಕಗಳನ್ನು ಖರೀದಿ ಮಾಡಿ ಹಸ್ತಾಂತರ ಮಾಡಿದೆ. ಈ ಉಪಕರಣಗಳು ಸಂಚಾರ ಮೇಲ್ವಿಚಾರಣೆಯನ್ನು ಉತ್ತಮಗೊಳಿಸಲು, ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ನಗರದಾದ್ಯಂತ ಸಂಚಾರ ನಿಯಮ ಜಾರಿಗೆ ತರಲು ಸಹಾಯ ಮಾಡಲಿದೆ. ಇದರಿಂದ ಸುಮಾರು 4,00,000 ಜನರು ಪ್ರಯೋಜನ ಹೊಂದಲಿದ್ದಾರೆ.

* ಬ್ಯಾಕ್-ಹೋ ಉಪಕರಣ: ಮೇ 2024ರಲ್ಲಿ ರೆಮಾಲ್ ಚಂಡಮಾರುತದಿಂದ ಉಂಟಾದ ಭೂಕುಸಿತದಂತಹ ನೈಸರ್ಗಿಕ ವಿಪತ್ತುಗಳಿಂದ ಬಹಳ ತೊಂದರೆಯಾಗಿದ್ದು, ಈ ನಿಟ್ಟಿನಲ್ಲಿ ಟಿಕೆಎಂ ಜಿಲ್ಲಾಡಳಿತಕ್ಕೆ ಎರಡು ಬ್ಯಾಕ್‌-ಹೋ ಯಂತ್ರಗಳನ್ನು ಒದಗಿಸಿದೆ. ಈ ಯಂತ್ರಗಳು ಭೂವಿಜ್ಞಾನದ ಅಸ್ಥಿರತೆ ಮತ್ತು ಯೋಜನಾರಹಿತ ನಗರಾಭಿವೃದ್ಧಿಯಿಂದ ಉಂಟಾಗಬಹುದಾದ ವಿಪತ್ತುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ನೆರವಾಗಲಿವೆ. ಇದರಿಂದ 4,00,000 ಜನರು ಪ್ರಯೋಜನ ಹೊಂದಲಿದ್ದಾರೆ.

ಈ ಎಂಓಯು ವಿನಿಮಯ ಕಾರ್ಯಕ್ರಮವು ಈ ವರ್ಷದ ಆರಂಭದಲ್ಲಿ ವಾಣಿಜ್ಯ ಟ್ಯಾಕ್ಸಿ ಚಾಲಕರನ್ನು ಗಮನದಲ್ಲಿಟ್ಟುಕೊಂಡು ನಡೆದ ರಾಜ್ಯವ್ಯಾಪಿ ರಸ್ತೆ ಸುರಕ್ಷತೆ ಮತ್ತು ಆರೋಗ್ಯ ಜಾಗೃತಿ ಅಭಿಯಾನಕ್ಕೆ ಕಳಶಪ್ರಾಯವಾಗಿ ಮೂಡಿಬಂದಿದೆ. ಮಿಜೋರಾಂ ಟ್ರಾಫಿಕ್ ಎಸ್ ಪಿ ಕಚೇರಿಯ ಸಹಕಾರದೊಂದಿಗೆ ಮತ್ತು ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ (ಜನವರಿ 18 – ಫೆಬ್ರವರಿ 17, 2025) ಪ್ರಯುಕ್ತ ನಡೆದ ಈ ಅಭಿಯಾನವು ರಾಜ್ಯಾದ್ಯಂತ 800ಕ್ಕೂ ಹೆಚ್ಚು ವಾಣಿಜ್ಯ ವಾಹನ ಚಾಲಕರಿಗೆ ಪ್ರಯೋಜನವನ್ನು ಒದಗಿಸಿತ್ತು. ಈ ಯೋಜನೆಯು ಉತ್ತಮ ಚಾಲನಾ ಅಭ್ಯಾಸಗಳನ್ನು ತಿಳಿಸುವ ಮತ್ತು ಅಪಘಾತದ ಅಪಾಯವನ್ನು ಕಡಿಮೆ ಮಾಡಲು ಸುರಕ್ಷಿತ ಚಾಲನಾ ತರಬೇತಿ ಕಾರ್ಯಕ್ರಮಗಳನ್ನು ಒಳಗೊಂಡಿತ್ತು. ಜೊತೆಗೆ ಚಾಲಕರ ದೈಹಿಕ ಯೋಗಕ್ಷೇಮವನ್ನು ನೋಡಿಕೊಳ್ಳಲು ಉಚಿತ ಆರೋಗ್ಯ ತಪಾಸಣೆಯನ್ನು ಒದಗಿಸಿತ್ತು.

ಈ ಸಂದರ್ಭದಲ್ಲಿ ಮಿಜೋರಾಂನ ಮಾನ್ಯ ಮುಖ್ಯಮಂತ್ರಿ ಶ್ರೀ ಲಾಲ್ಡುಹೋಮಾ ಅವರು, “ಮಿಜೋರಾಂ ರಾಜ್ಯವು ಮೂಲಸೌಕರ್ಯದ ಕೊರತೆಗಳನ್ನು ಮತ್ತು ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಒದಗಿಸುತ್ತಿರುವ ಈ ನೆರವು ಬಹಳ ಮಹತ್ವದ್ದಾಗಿದೆ. ಭೂಕುಸಿತ ಮತ್ತು ರಸ್ತೆ ಅಪಘಾತಗಳ ಸಂಖ್ಯೆ ಏರುತ್ತಿರುವಾಗ, ಹೆಚ್ಚಿನ ಸಿದ್ಧತೆ ಮತ್ತು ಸಾರ್ವಜನಿಕ ಸುರಕ್ಷತಾ ವ್ಯವಸ್ಥೆಗಳ ಅಗತ್ಯವಿದೆ. ಈ ಸಹಭಾಗಿತ್ವದ ಅಡಿಯಲ್ಲಿ ಸ್ಥಳೀಯ ಸಮಸ್ಯೆ ಪರಿಹರಿಸುವ ಕಾರ್ಯ ಮಾಡಲಾಗಿದೆ. ವಿಪತ್ತು ನಿರ್ವಹಣೆಗೆ ಅಗತ್ಯವಾದ ಉಪಕರಣಗಳನ್ನು ಒದಗಿಸುವುದು ಅಥವಾ ಐಜಾಲ್‌ ನಲ್ಲಿ ಸಂಚಾರ ಮೇಲ್ವಿಚಾರಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಉತ್ತಮ ಪರಿಹಾರ ಯೋಜನೆಗಳನ್ನು ಆಯೋಜಿಸಿದೆ. ಟೊಯೋಟಾ ಸಂಸ್ಥೆಯು ಚಾಲಕರಿಗಾಗಿ ನಡೆಸಿದ ರಸ್ತೆ ಸುರಕ್ಷತೆ ಮತ್ತು ಆರೋಗ್ಯ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಯೋಜನೆಯಿಂದ ಉತ್ತಮ ಫಲಿತಾಂಶ ಕೂಡ ದೊರಕಿದ್ದು, ಇದು ಸಂಸ್ಥೆಯು ನೀಡಿರುವ ಅರ್ಥಪೂರ್ಣ ಕೊಡುಗೆಗಳಲ್ಲಿ ಒಂದಾಗಿದೆ. ಮಿಜೋರಾಂನ ಅಭಿವೃದ್ಧಿಗೆ ಬದ್ಧವಾಗಿರುವ ಟೊಯೋಟಾ ಸಂಸ್ಥೆಯ ಮೇಲೆ ನಾವು ಅಪಾರ ಗೌರವ ಹೊಂದಿದ್ದೇವೆ” ಎಂದರು.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಕಂಟ್ರಿ ಹೆಡ್ ಮತ್ತು ಕಾರ್ಪೊರೇಟ್ ಅಫೇರ್ಸ್ ಹಾಗೂ ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶ್ರೀ ವಿಕ್ರಮ್ ಗುಲಾಟಿ ಅವರು, “ಅತ್ಯುತ್ತಮ ಸಾಮರ್ಥ್ಯ, ಸ್ಥಿರತೆ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿರುವ ಈಶಾನ್ಯವು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಸಂಸ್ಥೆಗೆ ಕೇವಲ ಕಾರ್ಯತಂತ್ರದ ಪ್ರದೇಶ ಮಾತ್ರವಲ್ಲ, ಬದಲಿಗೆ ನಮ್ಮ ಆದ್ಯತೆಯ ಸ್ಥಳವಾಗಿದೆ. ಈ ಪ್ರದೇಶದಾದ್ಯಂತ ನಮ್ಮ ಸಿಎಸ್ಆರ್ ಯೋಜನೆಗಳು ಸುಸ್ಥಿರ ಸಾರಿಗೆ, ಕೌಶಲ್ಯ ಅಭಿವೃದ್ಧಿ ಮತ್ತು ರಸ್ತೆ ಸುರಕ್ಷತೆ ಸಾಧಿಸುವ ಮೂಲಕ ಅರ್ಥಪೂರ್ಣ ಪರಿಣಾಮವನ್ನು ಉಂಟು ಮಾಡುವ ಕಡೆಗೆ ಗಮನ ಕೇಂದ್ರೀಕರಿಸಿವೆ. ಮಿಜೋರಾಂ ಸರ್ಕಾರದೊಂದಿಗಿನ ಈ ಎಂಓಯು ನಮ್ಮ ಆ ಬದ್ಧತೆಯನ್ನು ತೋರಿಸುತ್ತಿದ್ದು, ಸ್ಥಳೀಯವಾಗಿ ಸೂಕ್ತವಾದ ಮತ್ತು ದೀರ್ಘಕಾಲೀನ ಪರಿಣಾಮ ಉಂಟು ಮಾಡುವ ಸಮುದಾಯ ಕೇಂದ್ರಿತ ಪರಿಹಾರಗಳನ್ನು ಒದಗಿಸುವ ನಮ್ಮ ಗುರಿಯನ್ನು ಪ್ರತಿಬಿಂಬಿಸುತ್ತದೆ. ರಾಜ್ಯದೊಂದಿಗೆ ಸಹಕರಿಸಿ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ ಮತ್ತು ಮುಂಬರುವ ವರ್ಷಗಳಲ್ಲಿ ಈ ಸಹಕಾರವನ್ನು ಬಲಪಡಿಸಲು ಎದುರು ನೋಡುತ್ತಿದ್ದೇವೆ” ಎಂದರು.

ಈ ಯೋಜನೆಗಳ ಮೂಲಕ ಟಿಕೆಎಂ ತನ್ನ ‘ಸಮುದಾಯದೊಂದಿಗೆ ಒಟ್ಟಿಗೆ ಬೆಳೆಯುವ’ ತತ್ವಕ್ಕೆ ಬದ್ಧವಾಗಿದೆ. ಟಿಕೆಎಂನ ಪ್ರತೀ ಸಿಎಸ್ಆರ್ ಯೋಜನೆಯೂ ಈ ಪ್ರದೇಶದ ಅಗತ್ಯಗಳಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲ್ಪಟ್ಟಿದೆ. ಭಾರತದಾದ್ಯಂತ ಸಾಮಾಜಿಕ ಬದಲಾವಣೆಯನ್ನು ಉಂಟುಮಾಡುವ ಬಲವಾದ ಪರಂಪರೆ ಹೊಂದಿರುವ ಟಿಕೆಎಂ ಈಶಾನ್ಯದಲ್ಲಿ ತನ್ನ ಉಪಸ್ಥಿತಿ ವಿಸ್ತರಿಸುತ್ತಿದೆ. ಟಿಕೆಎಂ ಸ್ಥಳೀಯ ವಿಧಾನ ಮತ್ತು ರಾಷ್ಟ್ರದ ಆದ್ಯತೆಗೆ ಪೂರಕವಾಗಿ ಸಹಭಾಗಿತ್ವದ ಮೂಲಕ ದೀರ್ಘಕಾಲೀನ ಪರಿಣಾಮವನ್ನು ಸೃಷ್ಟಿಸುವ ಅದರ ನಂಬಿಕೆಯನ್ನು ಈ ಮೂಲಕ ಸಾರುತ್ತಿದೆ.