ಕಾರ್ಗಿಲ್ ವಿಜಯ್ ದಿವಸ್ ಮತ್ತು ಬಲಿದಾನಿಗಳ ಸ್ಮರಣೆ – ವಿಶೇಷ ಲೇಖನ

Kargil Vijay Diwas

Share this post :

coorg buzz

ಜುಲೈ 26—ಇದು ಭಾರತೀಯರ ಆತ್ಮಸ್ಮರಣೆಯ ದಿನ. ಇದು ಕೇವಲ ಒಂದು ಇತಿಹಾಸದ ಪುಟವಲ್ಲ; ದೇಶದ ಸಂವಿದಾನಿಕ ಸಮಗ್ರತೆಗಾಗಿ ಹೋರಾಡಿದ ವೀರ ಯೋಧರ ತ್ಯಾಗವನ್ನು ಸ್ಮರಿಸುವ ಪವಿತ್ರ ದಿವಸ. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವಿನ ಸಂಕೇತವಾಗಿ ಪ್ರತಿ ವರ್ಷದ ಈ ದಿನವನ್ನು ನಾವು ‘ಕಾರ್ಗಿಲ್ ವಿಜಯ ದಿವಸ’ ವಾಗಿ ಆಚರಿಸುತ್ತೇವೆ.

ಇತ್ತೀಚೆಗೆ ನಡೆದ ‘ಆಪರೇಷನ್ ಸಿಂಧೂರ’ ದೇಶದ ಜನಮನದಲ್ಲಿ ಹೊಸ ಚೈತನ್ಯ ಮೂಡಿಸಿದರೂ, ಅದಕ್ಕೂ ಮುನ್ನ ಹಿಮಾಲಯದ ಎತ್ತರದ ಪರ್ವತಗಳಲ್ಲಿ ನಡೆದ ಕಾರ್ಗಿಲ್ ಯುದ್ಧವು ಭಾರತೀಯ ಸೇನೆಯ ಶ್ರೇಷ್ಠತೆ, ಶೌರ್ಯ ಮತ್ತು ತ್ಯಾಗದ ಪ್ರತಿ ರೂಪವಾಗಿದೆ.

1999ರ ಮೇ ತಿಂಗಳಿನಲ್ಲಿ ಪಾಕಿಸ್ತಾನಿ ಸೇನೆಯ ಜೊತೆಗೂಡಿದ ಉಗ್ರರು ನಿಯಂತ್ರಣ ರೇಖೆ (LoC) ದಾಟಿ, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಉಚ್ಚ ಪ್ರದೇಶಗಳನ್ನು ಆಕ್ರಮಿಸಿದರು. ಈ ಆಕ್ರಮಣವು ಭಾರತಕ್ಕೆ ಆಘಾತ ನೀಡುವಷ್ಟು ತೀವ್ರವಾಗಿತ್ತು. ಪರ್ವತ ಶಿಖರಗಳಲ್ಲಿ ಬೀಡು ಬಿಟ್ಟ ಪಾಕಿಸ್ತಾನಿ ಸೇನೆ, ಲಡಾಖ್ ಅನ್ನು ಉಳಿದ ಭಾರತಕ್ಕೆ ಸಂಪರ್ಕಗೊಳಿಸುವ ಪ್ರಮುಖ ಹೆದ್ದಾರಿ NH-1Aಗೆ ಭದ್ರತಾ ಧಕ್ಕೆ ನೀಡುವ ನಿಟ್ಟಿನಲ್ಲಿ ಮುಂದೆ ಸಾಗಿತ್ತು.

ಭಾರತ ಈ ಆಕ್ರಮಣವನ್ನು ತಕ್ಷಣವೇ ತಡೆಹಿಡಿಯಲು ಆಪರೇಷನ್ ವಿಜಯ್ ಎಂಬ ಕೋಡ್‌ನಾಮಿನಲ್ಲಿ ಪ್ರತಿಕ್ರಿಯೆ ನೀಡಿತು. ಈ ಯುದ್ಧವು ರಾಜಕೀಯವಾಗಿ, ಭೂಗೋಳಿಕವಾಗಿ, ತಂತ್ರಜ್ಞಾನದಮಟ್ಟಿಗೂ ಭಾರತಕ್ಕೆ ಬಹುದೊಡ್ಡ ಸವಾಲಾಗಿತ್ತು.

ಯುದ್ಧದ ಪರಿಸ್ಥಿತಿ: ಮನುಷ್ಯ ಸಾಮರ್ಥ್ಯದ ಪರಾಕಾಷ್ಠೆ
ಎತ್ತರದ ಬಂಡೆಗಳಿಂದ ಕೂಡಿದ, ಆಮ್ಲಜನಕದ ಕೊರತೆಯ ತೀವ್ರ ಹಿಮಪಾತ ಪ್ರದೇಶಗಳಲ್ಲಿ ನಡೆಯುತ್ತಿದ್ದ ಈ ಯುದ್ಧದಲ್ಲಿ ಭಾರತೀಯ ಸೇನೆ ಮುಂದುವರೆಯಿತು. ಶತ್ರುಗಳು ಎತ್ತರದ ಸ್ಥಾನದಲ್ಲಿದ್ದು, ಭಾರತೀಯ ಸೈನಿಕರು ಕೆಳಗಿನಿಂದ ಮೇಲೆ ಸಾಗುತ್ತಾ ಹೋರಾಡಬೇಕಿತ್ತು. ಕಡಿದಾದ ಬಂಡೆಗಳನ್ನು ಏರಿ, ಶತ್ರುಗಳ ಗುಂಡಿನ ಮಳೆಗೆ ಎದೆಗೊಟ್ಟು ನಮ್ಮ ಸೈನಿಕರು ಮುನ್ನಡೆದರು. ಬಂಕರ್‌ಗಳನ್ನು ಧ್ವಂಸಗೊಳಿಸಿ, ಒಂದೊಂದಾಗಿ ಶಿಖರಗಳನ್ನು ವಶಪಡಿಸಿಕೊಳ್ಳುವುದು ಸುಲಭದ ಕೆಲಸವಾಗಿರಲಿಲ್ಲ. ತಾಪಮಾನ -10°C ರಿಂದ -40°C ನಡುವೆ ಕುಸಿದ ಸಂದರ್ಭದಲ್ಲಿ, ನಮ್ಮ ಯೋಧರು ಶತ್ರುಗಳೊಡನೆ ಹೋರಾಡಿ, ಶಿಖರಗಳನ್ನು ಮರಳಿ ವಶಪಡಿಸಿಕೊಳ್ಳುವ ಕಾರ್ಯವನ್ನು ಕೈಗೊಂಡರು.

ಈ ಹೋರಾಟ 60 ದಿನಗಳ ಕಾಲ ಆವೇಶಭರಿತವಾಗಿತ್ತು. ಪ್ರತಿಯೊಂದು ಶಿಖರವನ್ನು ವಶಪಡಿಸಿಕೊಳ್ಳುವುದು ಪ್ರತಿಯೊಬ್ಬ ಯೋಧನ ನಿಖರ ಯೋಜನೆ, ಧೈರ್ಯ ಮತ್ತು ಬಲಿದಾನದ ಫಲವಾಗಿತ್ತು.

ಜುಲೈ 26, 1999 ರಂದು ಭಾರತೀಯ ಸೇನೆಯು ಕಾರ್ಗಿಲ್‌ನಲ್ಲಿ ಸಂಪೂರ್ಣ ವಿಜಯ ಸಾಧಿಸಿತು. ನಾವು ನಮ್ಮ ಭೂಮಿಯನ್ನು ಮರಳಿ ಪಡೆದುಕೊಂಡೆವು. ಆದರೆ ಈ ಜಯ ಸುಲಭವಾಗಿರಲಿಲ್ಲ—ಈ ಯುದ್ಧದಲ್ಲಿ 527 ಮಂದಿ ಭಾರತೀಯ ಯೋಧರು ಹುತಾತ್ಮರಾದರು. ಸಾವಿರಕ್ಕೂ ಹೆಚ್ಚು ಯೋಧರು ಗಾಯಗೊಂಡರು. ತಾಯಿ ದೇಶದ ಗಡಿಯನ್ನು ಉಳಿಸಲು ಅವರು ನೀಡಿದ ಶ್ರೇಷ್ಠ ತ್ಯಾಗದ ಕಥೆಗಳು ಇಂದಿಗೂ ಕಣ್ಣೀರನ್ನು ತರಿಸುತ್ತದೆ.

ದೇಶದ ಕಣ್ಮಣಿ ,ಪರಮ ವೀರ ಚಕ್ರವೀರರು:
* ಕ್ಯಾಪ್ಟನ್ ವಿಕ್ರಮ್ ಬಾತ್ರಾ – “ಯೆ ದಿಲ್ ಮಾಂಗೇ ಮೊರ್” ಎಂಬ ಘೋಷವಾಕ್ಯದಿಂದ ಪ್ರಖ್ಯಾತಿ ಪಡೆದ ಈ ವೀರ, ಪಾಯಿಂಟ್ 4875 ವಶಪಡಿಸುವಲ್ಲಿ ಶ್ರೇಷ್ಠ ಶೌರ್ಯ ತೋರಿದರು.

* ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ – ಬನ್ತೋಲ್ ಕ್ಷೇತ್ರದಲ್ಲಿ ಶತ್ರು ಬಂಕರ್‌ಗಳನ್ನು ನಾಶಗೊಳಿಸುತ್ತಾ ತಮ್ಮ ಪ್ರಾಣವನ್ನೇ ಅರ್ಪಿಸಿದರು.

* ರೈಫಲ್ ಮ್ಯಾನ್ ಸಂಜಯ್ ಕುಮಾರ್, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ – ಅವರು ಶತ್ರು ಶಿಬಿರದೊಳಗೆ ನುಗ್ಗಿ ಶತ್ರುಗಳನ್ನು ಮತ್ತವರ ಅಪಾರ ಯುದ್ಧ ಸಾಮಗ್ರಿಗಳನ್ನು ನಾಶಮಾಡಿದರು.

ಮಹಾವೀರ ಚಕ್ರ ಪ್ರಶಸ್ತಿ ಪಡೆದ ಇತರೆ ವೀರರು
ಮೇಜರ್ ರಾಜೇಶ್ ಸಿಂಗ್ ಅಧಿಕಾರಿ,
ಮೇಜರ್ ಪದ್ಮಪಾಣಿ ಆಚಾರ್ಯ,
ಕ್ಯಾಪ್ಟನ್ ನೀಕೆಝಕುವೊ ಕೆಂಗುರುಸೆ,
ಲೆಫ್ಟಿನೆಂಟ್ ಬಲ್ವಾನ್ ಸಿಂಗ್,
ಲೆಫ್ಟಿನೆಂಟ್ ಕೀಶಿಂಗ್ ಕ್ಲಿಫರ್ಡ್ ನಾಂಗ್ರಮ್,
ನಾಯಕ್ ದಿಗೇಂದ್ರ ಕುಮಾರ್,
ಮೇಜರ್ ವಿವೇಕ್ ಗುಪ್ತಾ, ಮತ್ತಿತರರ
ಧೈರ್ಯ ಹಾಗೂ ಬಲಿದಾನಗಳು ದೇಶದ ಪ್ರತಿಯೊಬ್ಬ ನಾಗರಿಕನ ಕಣ್ಮುಂದೆ ಇಂದಿಗೂ ಕಾಣುತ್ತಿದ್ದು ಅದು ನಮ್ಮ ಶ್ರದ್ಧಾ ನಮನಕ್ಕೆ ಅರ್ಹವಾಗಿದೆ .

ಕಾರ್ಗಿಲ್ ವಿಜಯೋತ್ಸವವು ಕೇವಲ ಇತಿಹಾಸದ ಸ್ಮರಣೆ ಮಾತ್ರವಲ್ಲ. ಇದು ನಿಜವಾದ ದೇಶಭಕ್ತಿಯ ಪ್ರತಿಫಲನವಾಗಿದೆ. ಇಂದು ನಾವೆಲ್ಲರೂ ಭದ್ರವಾಗಿ ಬದುಕುತ್ತಿರುವ ಹಿನ್ನಲೆಯಲ್ಲಿ ಯೋಧರ ತ್ಯಾಗವಿದೆ ಎಂಬ ಸತ್ಯದ ನೆನಪು.

ಈ ದಿನ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸೋಣ,
ಅವರ ಕುಟುಂಬಗಳಿಗೆ ಬೆಂಬಲದ ಭರವಸೆ ನೀಡೋಣ, ಮುಂದಿನ ಪೀಳಿಗೆಗೆ ಶೌರ್ಯದ ಕಥೆಗಳನ್ನು ತಿಳಿಸೋಣ, ರಾಷ್ಟ್ರರಕ್ಷಣೆಯಲ್ಲಿ ಯೋಧರ ಪಾತ್ರವನ್ನು ಗೌರವಿಸೋಣ

ಕಾರ್ಗಿಲ್ ಯೋಧರು ತಾವು ನಮ್ಮ ಮನದಲ್ಲಿ ಶಾಶ್ವತವಾಗಿರುವುದನ್ನು ಅವರ ಬಲಿದಾನದಿಂದ ಸಾಬೀತುಪಡಿಸಿದ್ದಾರೆ. ಅವರು ಇಲ್ಲದಿದ್ದರೆ, ನಾವಿಲ್ಲ. ಅವರ ಶೌರ್ಯವಿಲ್ಲದೆ ಈ ದೇಶದ ಗಡಿಗಳಿಲ್ಲ.
ಪ್ರತಿ ಜುಲೈ 26ಕ್ಕೆ ನಾವು ಅವರಿಗೆ ಕೊಡಬೇಕಾದ ಶ್ರದ್ಧಾಂಜಲಿಯನ್ನು ಮರೆಯಬಾರದು. ನಮ್ಮ ರಕ್ಷಣೆಯಲ್ಲಿ ಅವರು ನಿಂತಿದ್ದಾರೆಂಬ ಭಾವನೆ ನಮ್ಮೊಳಗೆ ಸದಾ ಜೀವಂತವಾಗಿರಬೇಕು. ಈ ದಿನ, ನಾವು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ನಮ್ಮ ಸೇನಾಪಡೆಗಳ ಪಾತ್ರವನ್ನು ಗೌರವಿಸೋಣ. ಮುಂದಿನ ಪೀಳಿಗೆಗೆ ಅವರ ಶೌರ್ಯ ಮತ್ತು ತ್ಯಾಗದ ಕಥೆಗಳನ್ನು ಹೇಳುವ ಮೂಲಕ, ದೇಶಭಕ್ತಿಯ ಜ್ವಾಲೆಯನ್ನು ಸದಾ ಉರಿಯುವಂತೆ ಮಾಡೋಣ.

ಜೈ ಹಿಂದ್. ಕಾರ್ಗಿಲ್ ವೀರರಿಗೆ ನಮೋ ನಮಃ.

✍️ ಡಾ. ಕೆ. ಬಿ. ಸೂರ್ಯಕುಮಾರ್