ಮಡಿಕೇರಿ : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏ.೨೦ ರಿಂದ ಮೇ ೪ರವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ “ಜಿಪಿಎಲ್-ಗೌಡ ಪ್ರೀಮಿಯರ್ ಲೀಗ್” ಲೆದರ್ ಬಾಲ್ ಟಿ-೨೦ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಕೊಡಗು ಗೌಡ ಯುವ ವೇದಿಕೆ ಶಿಸ್ತು ಸಮಿತಿ ಅಧ್ಯಕ್ಷ ನವೀನ್ ದೇರಳ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಗೌಡ ಯುವ ವೇದಿಕೆ ಕಳೆದ ಹಲವಾರು ವರ್ಷಗಳಿಂದ ಗೌಡ ಜನಾಂಗ ಬಾಂಧವರಿಗೆ ಕ್ರೀಡಾಕೂಟ ಮತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು.
೨೦೨೩ರಲ್ಲಿ ಮೊದಲ ಬಾರಿಗೆ ಜನಾಂಗದ ಯುವ ಪೀಳಿಗೆಗೆ ಎಂಟರ್‌ಟೈನ್‌ಮೆಂಟ್ ಕ್ರಿಕೆಟ್‌ನಿಂದ ವೃತ್ತಿಪರ ಕ್ರಿಕೆಟ್‌ಗೆ ಉತ್ತೇಜನ ನೀಡುವ ಸಲುವಾಗಿ ಲೆದರ್‌ಬಾಲ್ ಕ್ರಿಕೆಟನ್ನು ಪರಿಚಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಉತ್ತಮವಾಗಿ ಮೂಡಿಬರುತ್ತಿರುವ ಕ್ರೀಡಾಕೂಟ ಈಗಾಗಲೇ ಜನಮನ ಗೆದ್ದಿದೆ ಹಾಗೂ ಪಟ್ಟಣಕ್ಕೆ ಸೀಮಿತವಾಗಿದ್ದ ಲೆದರ್‌ಬಾಲ್ ಕ್ರಿಕೆಟ್ ಈಗ ಹಲವಾರು ಗ್ರಾಮಗಳಲ್ಲಿ ಬೇಸಿಕ್ ಸೌಲಭ್ಯಗಳನ್ನು ಒದಗಿಸಿಕೊಂಡು ಯುವ ಪೀಳಿಗೆಗೆ ಪೋತ್ಸಾಹ ನೀಡಲಾಗುತ್ತಿದೆ. ಇದರಿಂದ ಮುಂದೆ ವೃತ್ತಿಪರ ಕ್ರಿಕೆಟ್‌ನಲ್ಲಿ ಉತ್ತಮ ಪ್ರತಿಭೆಗಳು ರೂಪುಗೊಳ್ಳಲು ಯುವ ವೇದಿಕೆ ಕಾರಣವಾಗುತ್ತಿದೆ. ಜನಾಂಗದ ಯುವ ಪೀಳಿಗೆ ಲೆದರ್ ಬಾಲ್ ಕ್ರಿಕೆಟ್ ಅನ್ನು ವೃತ್ತಿಪರವಾಗಿ ಅಳವಡಿಸಿಕೊಂಡಿರುವುದು ಗಮನಾರ್ಹ ಎಂದು ಹೇಳಿದರು.
೨೦೨೫ರ ಸೀಸನ್-೦೩ ರಲ್ಲಿ ಕಳೆದ ಬಾರಿಯ ದಿ ಎಲೈಟ್ ಎ ಮತ್ತು ಬಿ, ಜಿ ಕಿಂಗ್ ಸಿದ್ದಲಿಂಗಪುರ, ಕಾಫಿ ಕ್ರಿಕೆರ‍್ರ್ಸ್ ಮಡಿಕೇರಿ, ಕೂರ್ಗ್ ಹಾಕ್ಸ್ ಮಡಿಕೇರಿ, ಎಂಸಿಸಿ ಮಡಿಕೇರಿ, ಫ್ರೆಂಡ್ಸ್ ಕ್ಲಬ್ ಬಿಳಿಗೇರಿ ಭಾಗವಹಿಸಲಿದ್ದು, ಈ ಬಾರಿ ಲಾ ಕಗ್ಗೊಡ್ಲು, ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕೆವಿಜಿ ವಿದ್ಯಸಂಸ್ಥೆಯ ಅಮರ ಸುಳ್ಯ ರಾಯಲ್ಸ್ ತಂಡ ಸೇರಿದಂತೆ ಒಟ್ಟು ೧೦ ಫ್ರಾಂಚೈಸಿಗಳು ಪಾಲ್ಗೊಂಡು ಆಟಗಾರರನ್ನು ಬಿಡ್ಡಿಂಗ್ ಮುಖಾಂತರ ಈಗಾಗಲೇ ಖರೀದಿ ಮಾಡಲಾಗಿದೆ ಎಂದು ಹೇಳಿದರು.
ಪಂದ್ಯಾವಳಿಯ ವಿಜೇತರಿಗೆ ಪ್ರಥಮ ಬಹುಮಾನ ರೂ.೧,೨೫,೦೦೦, ದ್ವಿತೀಯ ರೂ.೭೫,೦೦೦, ತೃತೀಯ ಬಹುಮಾನ ರೂ.೪೫,೦೦೦ ನಗದು ಮತ್ತು ಕಳೆದ ಸೀಸನ್‌ನಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಬಿಡುಗಡೆ ಮಾಡಿದ ಗೌಡ ಸಂಸ್ಕೃತಿ ಮತ್ತು ಬಲಿದಾನದ ಪ್ರತೀಕವಾದ ಆಕರ್ಷಕ ಟ್ರೋಫಿ ಹಾಗೂ ಹಲವಾರು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಕಳೆದ ಎರಡು ವರ್ಷದ ಲೆದರ್ ಬಾಲ್ ಕ್ರೀಡಾಕೂಟಕ್ಕಿಂತ ಈ ಬಾರಿ ವಿಜ್ರಂಭಣೆಯಿಂದ ಪಂದ್ಯಾವಳಿಯನ್ನು ನಡೆಸಲು ತೀರ್ಮಾನಿಸಲಾಗಿದ್ದು, ಪಂದ್ಯಾವಳಿಯ ನೇರ ಪ್ರಸಾರ ಇರುತ್ತದೆ ಮತ್ತು ಕ್ರೀಡಾಕೂಟದಲ್ಲಿ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ಪೀಳಿಗೆಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಒಕ್ಕಲಿಗ ಜನಾಂಗದ ಕ್ರೀಡಾಕೂಟಕ್ಕೆ ಸರಕಾರದಿಂದ ಅನುದಾನ ಬಿಡುಗಡೆ ಮಾಡುವ ಮೂಲಕ ಜನಾಂಗದ ಅಭಿವೃದ್ಧಿಗೆ ಸಹಕರಿಸುವಂತೆ ಈಗಾಗಲೇ ಮಡಿಕೇರಿ ಮತ್ತು ವಿರಾಜಪೇಟೆ ಶಾಸಕರಿಗೆ ಮನವಿ ಸಲ್ಲಿಸಲಾಗಿದ್ದು, ಸುಮಾರು ೧ ಕೋಟಿಯಷ್ಟು ಅನುದಾನ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.
ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ನ ಕಾರ್ಯದರ್ಶಿ ದುಗ್ಗಳ ಕಪಿಲ್ ಮಾತನಾಡಿ, ಮೇ ೩ ರಂದು ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮತ್ತು ಕೊಡಗು ಗೌಡ ಯುವ ವೇದಿಕೆ ಸಹಯೋಗದೊಂದಿಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕುಟುಂಬವಾರು ಹೊನಲು ಬೆಳಕಿನ ಪುರುಷರ ಮುಕ್ತ ಮಡ್ “ಕಬಡ್ಡಿ ಪೈಪೋಟಿ” ನಡೆಯಲಿದ್ದು, ಪಂದ್ಯಾವಳಿಯ ಪ್ರಥಮ ವಿಜೇತ ತಂಡಕ್ಕೆ ರೂ.೨೫ ಸಾವಿರ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೧೫ ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ ೧೦ ಸಾವಿರ ನಗದು ಬಹುಮಾನ ಸೇರಿದಂತೆ ಆಕರ್ಷಕ ಟ್ರೋಫಿ ನೀಡಲಾಗುವುದು. ಆಸಕ್ತರು ರೂ.೨,೫೦೦ ನ್ನು ಪಾವತಿಸಿ ತಂಡದ ನೊಂದಾಣಿಯನ್ನು ಖಾತರಿಪಡಿಸಿಕೊಳ್ಳಬೇಕು. ಮೊದಲು ಬಂದ ೩೨ ತಂಡಗಳಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಹಾಗೂ ನೋಂದಣಿಗಾಗಿ ೯೭೩೧೦೦೯೮೪೧, ೯೯೭೨೩೭೬೧೫೧, ೯೯೮೦೦೦೪೩೭೪, ೭೦೧೯೬೭೧೧೩೦ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಕೊಡಗು-ದಕ್ಷಿಣ ಕನ್ನಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೂಟೇರ ಪುಷ್ಪಾವತಿ ರಮೇಶ್ ಮಾತನಾಡಿ, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಮೇ ೩ ಹಾಗೂ ೪ ರಂದು ಕ್ರಿಕೆಟ್ ಪಂದ್ಯಾವಳಿಯನ್ನು ಕೊಡಗು ಗೌಡ ಯುವ ವೇದಿಕೆಯ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ. ಗೌಡ ಮಹಿಳಾ ತಂಡಗಳಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದ್ದು, ಪ್ರಥಮ ಬಹುಮಾನ ರೂ.೨೫ ಸಾವಿರ, ದ್ವಿತೀಯ ಬಹುಮಾನ ೧೫ ಸಾವಿರ ಹಾಗೂ ತೃತೀಯ ಬಹುಮಾನ ೧೦ ಸಾವಿರ ರೂ. ನಗದು ಬಹುಮಾನ ಸೇರಿದಂತೆ ಆಕರ್ಷಕ ಟ್ರೋಫಿ ಮತ್ತು ವೈಯುಕ್ತಿಕ ಬಹುಮಾನಗಳನ್ನು ಕೂಡ ನೀಡಲಾಗುವುದು ಎಂದರು.
ಈಗಾಗಲೇ ಕೆಲವು ತಂಡಗಳು ನೋಂದಯಿಸಿಕೊಂಡಿದ್ದು, ಗೌಡ ಜನಾಂಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳನ್ನು ನೋಂದಯಿಸಿಕೊಳ್ಳುವಂತೆ ಮನವಿ ಮಾಡಿದ ಅವರು, ಆಸಕ್ತರು ತಂಡದ ನೋಂದಣಿಗಾಗಿ ೯೮೪೪೯೬೩೮೫೮, ೯೬೬೩೨೫೪೮೨೯, ೯೯೦೦೯೯೨೩೬೦ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಉಪಾಧ್ಯಕ್ಷ ಬಾಲಡಿ ಮನೋಜ್, ಕೊಡಗು-ದಕ್ಷಿಣ ಕನ್ನಡ ಮಹಿಳಾ ಒಕ್ಕೂಟದ ಸಂಸ್ಥಾಪಕ ಸಂಚಾಲಕಿ ಪುದಿಯನೆರವನ ರೇವತಿ ರಮೇಶ್ ಉಪಸ್ಥಿತರಿದ್ದರು.